ರೈಲ್ವೆ ರಿಯಾಯಿತಿ ದರ ಸೌಲಭ್ಯಕ್ಕೆ ಅರ್ಹರಾಗಿರುವ ಅಥವಾ ಮಾನ್ಯ ಗುರುತಿನ ಚೀಟಿ ಹೊಂದಿರುವ ವಿಶೇಷಚೇತನರು ಅರ್ಹ ಪ್ರಯಾಣಿಕರಾಗಿ ಎಸ್ ಎಲ್ ಆರ್ ಡಿ ಮತ್ತು ಎಲ್ ಎಸ್ ಎಲ್ ಆರ್ ಡಿ ಬೋಗಿಗಳಲ್ಲಿ ಪ್ರಯಾಣಿಸಬಹುದು
ವಿಶೇಷಚೇತನರಿಗೆ ಮೀಸಲಾದ ಬೋಗಿಗಳಲ್ಲಿ ಅನಧಿಕೃತವಾಗಿ ಪ್ರಯಾಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನೈಜ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತೆ ಖಾತರಿಪಡಿಸಲಾಗುವುದು.
ಭಾರತೀಯ ರೈಲ್ವೆಯು ಸಮಗ್ರ ಪ್ರಯಾಣ ಮತ್ತು ಸಮರ್ಪಕ ಆಸನ ಲಭ್ಯತೆ ಖಚಿತಪಡಿಸಿಕೊಳ್ಳಲು, ಮಾನ್ಯವಾದ ವಿಶಿಷ್ಟ ದಿವ್ಯಾಂಗ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್ ಹೊಂದಿರುವ ವಿಶೇಷಚೇತನ ವ್ಯಕ್ತಿ (ಪಿಡಬ್ಲ್ಯೂಡಿ) ಗಳು ಮೇಲ್/ಎಕ್ಸ್ಪ್ರೆಸ್ ರೈಲುಗಳಲ್ಲಿ ವಿಶೇಷಚೇತನರಿಗೆ ಮೀಸಲಿಡಲಾದ ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ವಿಶೇಷಚೇತನರ ಸಬಲೀಕರಣ ಇಲಾಖೆ (DEPwD) ನೀಡಿರುವ ಮಾನ್ಯ ಯುಡಿಐಡಿ ಕಾರ್ಡ್ ಹೊಂದಿರುವ ವಿಶೇಷಚೇತನರು ಹಾಗೂ ಭಾರತೀಯ ರೈಲ್ವೆಯಿಂದ ರಿಯಾಯಿತಿ ದರದ ಸೌಲಭ್ಯವನ್ನು ಪಡೆದವರನ್ನು, ದಿವ್ಯಾಂಗ ಜನರಿಗೆ ಮೀಸಲಿಡಲಾದ ಎರಡನೇ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ (ಎಸ್ ಎಲ್ ಆರ್ ಡಿ) ಬೋಗಿ ಅಥವಾ ದಿವ್ಯಾಂಗ ಜನರಿಗೆ ಮೀಸಲಿಟ್ಟಿರುವ ಲಗೇಜ್-ಕಮ್-ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ಎಲ್ ಎಸ್ ಎಲ್ ಆರ್ ಡಿ ) ನಲ್ಲಿ ಪ್ರಯಾಣಿಸಲು ಅರ್ಹರಿರುವ ಪ್ರಯಾಣಿಕರೆಂದು ಪರಿಗಣಿಸಲಾಗುತ್ತದೆ. ಅವರು ಮಾನ್ಯ ಪ್ರಯಾಣ ಪ್ರಾಧಿಕಾರದ ಗುರುತಿನ ಚೀಟಿ ಹೊಂದಿರಬೇಕಿದೆ.

Image :Occasional – by Ai
ಈ ಗೊತ್ತುಪಡಿಸಿದ ಬೋಗಿಗಳಲ್ಲಿ ಪ್ರಯಾಣಿಸುವ ಅನಧಿಕೃತ ಪ್ರಯಾಣಿಕರ ವಿರುದ್ಧ ರೈಲ್ವೆ ಕಾಯ್ದೆ, 1989 ರ ನಿಬಂಧನೆಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ತಿಳಿಸಿದೆ. ಉದ್ದೇಶಿತ ಫಲಾನುಭವಿಗಳು ಯಾವುದೇ ಅನಾನುಕೂಲತೆಯಿಲ್ಲದೆ ಸೌಲಭ್ಯಗಳನ್ನು ಪಡೆಯುವುದನ್ನು ಮತ್ತು ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿಬಂಧನೆಗಳ ಸಮರ್ಪಕ ಅನುಷ್ಠಾನವನ್ನು ಖಾತರಿಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಎಲ್ಲಾ ವಲಯ ರೈಲ್ವೆಗಳಿಗೆ ಸೂಚಿಸಲಾಗಿದೆ.
ಇ-ಟಿಕೆಟಿಂಗ್ ಫೋಟೋ ಗುರುತಿನ ಚೀಟಿ (ಇಪಿಐಸಿಎಸ್) ಎಂದೂ ಕರೆಯಲ್ಪಡುವ ದಿವ್ಯಾಂಗಜನ ಕಾರ್ಡ್, ರೈಲ್ವೆಯು ವಿಶೇಷಚೇತನರಿಗೆ (ದಿವ್ಯಾಂಗಜನ) ನೀಡುವ ಗುರುತಿನ ಚೀಟಿಯಾಗಿದ್ದು, ಇದು ರೈಲು ಪ್ರಯಾಣದಲ್ಲಿ ರಿಯಾಯಿತಿಗಳನ್ನು ಪಡೆಯಲು ಅನುವು ಮಾಡಿಕೊಡಲಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಕಾರ್ಡ್ ಅನ್ನು ಮಾನ್ಯ ಅಂಗವೈಕಲ್ಯ/ರಿಯಾಯಿತಿ ಪ್ರಮಾಣಪತ್ರದ ಆಧಾರದ ಮೇಲೆ ನೀಡಲಾಗುತ್ತದೆ, ಕೆಲವು ವರ್ಗಗಳಿಗೆ ಯುಡಿಐಡಿ ಕಾರ್ಡ್ ಅನ್ನು ಮಾನ್ಯ ಮಾಡಲಾಗುತ್ತದೆ. ಗುರುತಿನ ಚೀಟಿ ಪಡೆಯಲು ಅಥವಾ ನವೀಕರಣಕ್ಕಾಗಿ ಭಾರತೀಯ ರೈಲ್ವೆ ದಿವ್ಯಾಂಗಜನ ಪೋರ್ಟಲ್ ಅಥವಾ ಕೇಂದ್ರ ಸರ್ಕಾರಿ ಸೇವೆಗಳ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Source:PIB


