ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗುರುನಾನಕ್ ಜಯಂತಿ ಅಂಗವಾಗಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ತಿಂಗಳ ಅಂತ್ಯಕ್ಕೆ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವ ಸಾಂವಿಧಾನಿಕ ಕ್ರಮಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೇವೆ. ಆದ್ದರಿಂದ ಗುರು ಪರ್ವ ಈ ಸಂದರ್ಭದಲ್ಲಿ ಪ್ರತಿಭಟನಾಕಾಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನೀವೆಲ್ಲರೂ ನಿಮ್ಮ ಮನೆಗಳಿಗೆ ವಾಪಸಾಗಿ, ಗದ್ದೆಗಳಿಗೆ ತೆರಳಿ ಕೆಲಸ ಆರಂಭಿಸಿ. ಕುಟುಂಬದೊಂದಿಗೆ ಹೊಸ ಜೀವನ ಆರಂಭಿಸಿ ಎಂದು ಪ್ರಧಾನಿ ಹೇಳಿದರು.
ಕೃಷಿಕರ ಜೀವನ ಸುಧಾರಣೆಗೆ 3 ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರೂಪಿಸಿತ್ತು. ರೈತರಿಗೆ ನ್ಯಾಯ ಒದಗಿಸುವುದು, ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ತಜ್ಞರ ಸಲಹೆ ಪಡೆದು ನೀತಿ ರೂಪಿಸಲಾಗಿತ್ತು. ಕೃಷಿ ಅರ್ಥಶಾಸ್ತ್ರಜ್ಞರು, ತಜ್ಞರು, ಪ್ರಗತಿಪರ ರೈತರು ಈ ಕಾಯ್ದೆಗಳನ್ನು ಸ್ವಾಗತಿಸಿದ್ದರು. ಆದರೆ, ರೈತರ ಒಂದು ವರ್ಗ ಇದನ್ನು ವಿರೋಧಿಸಿತು. ಕಾಯ್ದೆಯ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಲು ಮುಕ್ತ ಮನಸ್ಸಿನಿಂದ ಪ್ರಯತ್ನಿಸಿದೆವು. ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವುದಾಗಿಯೂ ಹೇಳಿದೆವು. ಆದರೆ, ರೈತರ ಒಂದು ವರ್ಗ ಇದಕ್ಕೆ ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂದು ನಾನು ದೇಶದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಇದನ್ನು ಸ್ವಚ್ಛ ಮನಸ್ಸು ಮತ್ತು ಪವಿತ್ರ ಹೃದಯದಿಂದ ಹೇಳುತ್ತಿದ್ದೇನೆ. ನಮ್ಮ ತಪಸ್ಸು ಕಡಿಮೆಯಾಗಿರಬಹುದು. ದೀಪದ ಬೆಳಕಿನಂತಹ ಸತ್ಯವನ್ನು ತಿಳಿಸಲು ವಿಫಲವಾಗಿರಬಹುದು. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದರು.ಆದರೆ, ಕೃಷಿ ಕ್ಷೇತ್ರಕ್ಕೆ ನಮ್ಮ ಆದ್ಯತೆ ಮುಂದುವರಿಯಲಿದೆ. ಶೂನ್ಯ ಕೃಷಿ, ಈ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ, ವೈಜ್ಞಾನಿಕ ಬೆಳೆ ಪದ್ಧತಿ ಹಾಗೂ ಪಾರದರ್ಶಕ ಕನಿಷ್ಟ ಬೆಂಬಲ ಬೆಲೆ ನೀಡಲು ಮತ್ತು ಕೃಷಿ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು. ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರತಿನಿಧಿಗಳು, ರೈತರು, ಕೃಷಿ ವಿಜ್ಞಾನಿಗಳು, ಕೃಷಿ ಅರ್ಥಶಾಸ್ತ್ರಜ್ಞರು ಇರಲಿದ್ದಾರೆ ಎಂದರು. ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೃಷಿ ಕ್ಷೇತ್ರಕ್ಕೆ ನೀಡಿದ ನೆರವು ಮತ್ತು ಇದರಿಂದ ಆಗಿರುವ ಬದಲಾವಣೆಗಳ ಕುರಿತು ಪ್ರತಿಪಾದಿಸಿದ ಪ್ರಧಾನಿ, ಇದುವರೆಗೆ ನಮ್ಮ ಸರಕಾರ ರೈತರ ಹಿತ ಕಾಪಾಡುವ ಕೆಲಸ ಮಾಡಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.
