ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲು ಅವರ ಸಮಾಜಮುಖಿ ಕಾರ್ಯಗಳ ಸಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾನತ ದಿನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಚಾಲನೆ ನೀಡಿದರು.
ನಂತರ ಮುಖ್ಯಮಂತ್ರಿ, ಮುರುಘಾ ಶರಣರ ಜನ್ಮ ದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು. ಬಸವಣ್ಣನವರ ವೈಚಾರಿಕತೆ, ತತ್ವಾದರ್ಶಗಳನ್ನು ಪುನಃ ಬಿತ್ತುವಂತಹ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ. ಶಿವಮೂರ್ತಿ ಮುರುಘಾಶರಣರ ಜನ್ಮದಿನವನ್ನು ಸಮಾನತಾ ದಿನ ಎಂದು ಆಚರಿಸುವುದು ಸೂಕ್ತವಾಗಿದೆ. ಬಸವಾದಿ ಶರಣರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆಯ ಸಲುವಾಗಿ, ಅಸ್ಪೃಷ್ಯತೆ, ಮೂಢನಂಬಿಕೆ ವಿರುದ್ಧ, ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದರು. ಇದೀಗ 21ನೇ ಶತಮಾನದಲ್ಲೂ ಅಂತಹ ಪದ್ಧತಿ ಅಸ್ತಿತ್ವದಲ್ಲಿವೆ. ಹೀಗಾಗಿ ಈ ಸಮಸ್ಯೆಗಳನ್ನು ನಿರಂತರವಾಗಿ ಶುದ್ಧೀಕರಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮುರುಘಾ ಶರಣರು ಹೋರಾಟ ಮಾಡುತ್ತಿದ್ದು, ಅವರೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಭಾರತಕ್ಕೆ 5 ಸಾವಿರ ವರ್ಷದ ಚರಿತ್ರೆ ಇದೆ. ಅದರೊಂದಿಗೆ ಚಾರಿತ್ರ್ಯ ಬೇಕಾಗಿದೆ. ಅದೇ ರೀತಿ ತತ್ವ, ಸಿದ್ಧಾಂತಗಳನ್ನು ಹೇಳುವ ಆಚಾರ್ಯರಿದ್ದಾರೆ. ಅದರ ಜತೆಗೆ ಆಚಾರ ಬೇಕಾಗಿದೆ. ಆದ್ದರಿಂದ ಚಾರಿತ್ಯ ಮತ್ತು ಆಚಾರದ ಮೂಲಕ ಸಶಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಮುರುಘಾ ಶರಣರು, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ವಿ. ಸುನಿಲ್ ಕುಮಾರ್, ಶಾಸಕ ರಾಜಶೇಖರ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
