ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆದೇಶದಂತೆ ಪ್ರತಿ ವಾರ್ಡ್‌ಗೆ ಸಾರ್ವಜನಿಕವಾಗಿ ಒಂದು ಗಣಪತಿ ಪ್ರತಿಷ್ಠಾಪನೆ ಹಾಗೂ ಗರಿಷ್ಠ ಮೂರು ದಿನಗಳ ಕಾಲ ಗಣಪತಿ ಹಬ್ಬ ಆಚರಣೆಗೆ ಅವಕಾಶವಿದೆ ಎಂದು ಬೆಂಗಳೂರಿನ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಗಣಪತಿ ಪ್ರತಿಷ್ಠಾಪಿಸುವ ಆಯೋಜಕರು ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಪೂಜಾ ಕಾರ್ಯವನ್ನು ಹೊರತುಪಡಿಸಿ ಧ್ವನಿವರ್ಧಕ ಬಳಕೆ, ಸಾಂಸ್ಕೃತಿಕ ಸಮಾರಂಭ, ಮೆರವಣಿಗೆ ಹಾಗೂ ಇತರ ಚಟುವಟಿಕೆಗಳಿಗೆ ನಿಷೇಧವಿದೆ. ಗರಿಷ್ಠ 20 ಕ್ಕಿಂತ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಒಟ್ಟಾಗಿ ಸೇರುವಂತಿಲ್ಲ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ , ಪ್ರತೀ ವಾರ್ಡ್‌ನಲ್ಲಿಯೂ ಯಾವ ಜಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ನಿರ್ಧರಿಸಲಿದ್ದಾರೆ. ಆಯೋಜಕರೆಲ್ಲರೂ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು, ಕೋವಿಡ್ ನಿಯಮಗಳನ್ನು ಮೀರಬಾರದೆಂದು ತಿಳಿಸಿದರು. ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿ 4 ಅಡಿ ಮೀರಬಾರದು. ಕೆರೆಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆ ನಿಷೇಧಿಸಲಾಗಿದ್ದು, ಕೃತಕ ವಿಸರ್ಜನಾ ಕೇಂದ್ರಗಳ ಸ್ಥಾಪನೆಯ ಜೊತೆಗೆ ಪ್ರತಿ ವಾರ್ಡ್‌ನಲ್ಲಿ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲಾಗುವುದು ಎಂದರು.
