ಬೆಳಗಾವಿ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯಹಕ್ಕು ಸಂರಕ್ಷಣಾ ವಿಧೇಯಕ ಕುರಿತು ವಿಧಾನಸಭೆಯಲ್ಲಿಂದು ವ್ಯಾಪಕ ಚರ್ಚೆ ನಡೆಯಿತು. ಕಾಯ್ದೆ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಗಾಗಲೇ ಒತ್ತಾಯದ ಮತಾಂತರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಕುರಿತು ಮತ್ತೊಂದು ಹೊಸ ಕಾಯ್ದೆ ತರುವ ಅವಶ್ಯಕತೆ ಇಲ್ಲ. ಸರ್ಕಾರ ಕಾಯ್ದೆಯನ್ನು ಕೈಬಿಡುವುದು ಸೂಕ್ತ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರೂ, ಯಾವ ಧರ್ಮವನ್ನು ಸ್ವೀಕರಿಸಬೇಕು ಎಂಬುದರ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಆದರೆ, ಕೆಲವರು ಆಸೆ, ಆಮಿಷಗಳನ್ನೊಡ್ಡಿ , ಮನ ಪರಿವರ್ತನೆ ಮಾಡುವ ಮೂಲಕ ಮತಾಂತರಗೊಳಿಸುತ್ತಿದ್ದಾರೆ. ಇದನ್ನು ತಡೆಯುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸಂವಿಧಾನದ ಆಶಯದಂತೆ ಮತಾಂತರ ನಿಷೇಧ ಜಾರಿಗೆ ತರಲಾಗಿದೆ ಎಂದು ಉತ್ತರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ – 2021ನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಬಳಿಕ, ವಿಧೇಯಕ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಹಿಂದಿನ ಸರ್ಕಾರವೇ ಈ ಮಸೂದೆ ಬಗ್ಗೆ ಕರಡು ಸಿದ್ಧಪಡಿಸಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲಾಗುವುದು. ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವವರನ್ನು ಶಿಕ್ಷಿಸುವ ಉದ್ದೇಶದಿಂದ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದಿನ ಸರ್ಕಾರ ಒಪ್ಪಿಗೆ ನೀಡಿರುವ ಕುರಿತು ಮಾಹಿತಿ ಕೇಳಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರ ನೀಡಿದ ದಾಖಲೆಗಳನ್ನು ಸದನದ ಮುಂದಿರಿಸಿ ಮಸೂದೆಯ ಕರಡಿಗೆ ಹಿಂದಿನ ಸರ್ಕಾರ ಒಪ್ಪಿಗೆ ನೀಡಿರುವ ಬಗ್ಗೆ ಮಾಹಿತಿ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡರು.
“ಸರ್ಕಾರದ ಕೋವಿಡ್-19 ಸೋಂಕು ನಿಯಂತ್ರಣ ನಿಯಮಗಳನ್ನು ಪಾಲಿಸಿ, ಇದು ಸ್ಕೈ ನ್ಯೂಸ್ RTWT ಕಳಕಳಿ”