ನವದೆಹಲಿ: ಸಂಸತ್ತಿನ ಉಭಯ ಸದನಗಳ ಕಲಾಪವೇ ನಡೆಯದಂತೆ ಅಡ್ಡಿ ಪಡಿಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಅಧಿವೇಶನ ಕುರಿತಂತೆ ವಿವರ ನೀಡಿದ ಅವರು, ನವೆಂಬರ್ 29ರಂದು ಆರಂಭವಾಗಿ ಇಂದು ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನದಲ್ಲಿ ಒಟ್ಟು 24 ದಿನಗಳ ಕಾಲದ ಅಂತರದಲ್ಲಿ 18 ದಿನಗಳ ಕಾಲ ಕಲಾಪ ನಡೆದಿದ್ದು, ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ 10 ಸೇರಿ ಒಟ್ಟಾರೆ 13 ಮಸೂದೆಗಳನ್ನು ಮಂಡಿಸಲಾಗಿದ್ದು, 9 ಮಸೂದೆಗಳು ರಾಜ್ಯಸಭೆಯಲ್ಲಿ ಮತ್ತು 12 ಲೋಕಸಭೆಯಲ್ಲಿ ಅಂಗೀಕಾರ ಪಡೆದಿವೆ ಎಂದು ತಿಳಿಸಿದರು.

ಎಲ್ಲ ಸದಸ್ಯರಿಗೂ ಸದನದಲ್ಲಿ ಮಾತನಾಡಲು ಅವಕಾಶ ಇರಬೇಕು ಎಂಬುದು ಸ್ಪೀಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಆಶಯವಾಗಿದೆ. ಹೀಗಾಗಿ ಯಾರು ಸದನದಲ್ಲಿ ಮಾತನಾಡಿಲ್ಲವೋ ಅಂತಹ ಸದಸ್ಯರಿಗೆ ಅವಕಾಶ ನೀಡಿ ಶೂನ್ಯವೇಳೆಯಲ್ಲಿ ಮತ್ತು ಇತರ ಸಂದರ್ಭದಲ್ಲಿ ತಮ್ಮ ಕ್ಷೇತ್ರದ, ರಾಜ್ಯದ ವಿಷಯ ಪ್ರಸ್ತಾಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಶೂನ್ಯವೇಳೆಯಲ್ಲಿ, ನಿಯಮ 377ರ ಅಡಿಯಲ್ಲಿ ಪ್ರಸ್ತಾಪವಾಗುವ ವಿಚಾರಗಳಿಗೆ ಉತ್ತರ ನೀಡುವ ಮತ್ತು ಆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವಂತೆ ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ತಿಳಿಸಿದರು. ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದರೂ ಲೋಕಸಭೆಯ ಫಲಪ್ರದತೆ ಶೇಕಡ 82ರಷ್ಟಿದ್ದರೆ, ರಾಜ್ಯಸಭೆಯ ಫಲಪ್ರದತೆ ಶೇಕಡ 47ರಷ್ಟಿತ್ತು ಎಂದು ತಿಳಿಸಿದರು. ಅಧಿವೇಶನಕ್ಕೆ ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಸ್ಪೀಕರ್ ಓಂ ಬಿರ್ಲಾ, ಸಭಾಪತಿ ಎಂ. ವೆಂಕಯ್ಯನಾಯ್ಡು ಹಾಗೂ ಎಲ್ಲ ಪೀಠಾಸೀನ ಅಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.