ಕರ್ನಾಟಕ:
- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ 10ರಂದು ನಡೆಯಲಿರುವ ದ್ವೈ ವಾರ್ಷಿಕ ಚುನಾವಣೆಯಲ್ಲಿ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ಅನಿವಾರ್ಯವಾಗಿದೆ.
- ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ನೀರಿಕ್ಷೆ ಇದೆ.
- ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳ ಪರಿಷ್ಕರಣೆ ಪೂರ್ಣಗೊಂಡಿದ್ದು, ಹಾಲಿ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
- ಹದಿನೈದು ಸಾವಿರ ಶಿಕ್ಷಕರ ನೇಮಕಾತಿಗೆ ನಡೆದ ಸಿಇಟಿ ಪರೀಕ್ಷೆಯ ಕೀ-ಉತ್ತರಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ ೧ ಮತ್ತು ಪತ್ರಿಕೆ ೨ರ ಕೀ-ಉತ್ತರಗಳನ್ನು ಇಲಾಖೆಯ ಜಾಲತಾಣ ಸ್ಕೂಲ್ ಎಜುಕೇಶನ್ ಡಾಟ್ ಕೆಎಆರ್ ಡಾಟ್ ನಿಕ್ ಡಾಟ್ ಇನ್ ನಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಜೂನ್ ೧೦ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ಇತರೆ ಪ್ರಮುಖ ರಾಷ್ಟ್ರೀಯ ಸುದ್ದಿಗಳು :
- ಅಜರ್ ಬೈಜಾನ್ ನ ಬಾಕುನಲ್ಲಿ ನಡೆಯುತ್ತಿರುವ IISF ವಿಶ್ವಕಪ್ ಶೂಟಿಂಗ್ ಸ್ಲರ್ಧೆಯಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಮಹಿಳೆಯರ 50 ಮೀಟರ್ ರೈಫಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೇರಿದೆ.
- ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಉತ್ತರ ಪ್ರದೇಶದಿಂದ ಘನಶ್ಯಾಮ್ ಲೋಧಿ ಮತ್ತು ದಿನೇಶ್ ಲಾಲ್ ಯಾದವ್, ತ್ರಿಪುರದಿಂದ ಸಿಎಂ ಮಾಣಿಕ್ ಸಾಹಾ, ದೆಹಲಿಯಿಂದ ರಾಜೇಶ್ ಭಾಟಿಯಾ ಮತ್ತು ಜಾರ್ಖಂಡ್‌ನಿಂದ ಗಂಗೋತ್ರಿ ಕುಜೂರ್ ಸ್ಪರ್ಧಿಸಲಿದ್ದಾರೆ.
- ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ತಮ್ಮ 3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಇಂದು ಕತಾರ್‌ಗೆ ಭೇಟಿ ನೀಡಲಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸೆನೆಗಲ್‌ನ ಡಾಕರ್‌ನಲ್ಲಿ ಭಾರತ-ಸೆನೆಗಲ್ ವ್ಯಾಪಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
- ರೈಲ್ವೆ ನಿಲ್ದಾಣಗಳಲ್ಲಿ ನಿಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತವಾಗಿ ಇರಿಸಲು, ಡಿಜಿಟಲ್ ಸ್ಮಾರ್ಟ್ ಕ್ಲೋಕ್ ರೂಮ್ಗಳ (ಡಿಜಿಲಾಕರ್ಸ್) ಪರಿಕಲ್ಪನೆಯನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ.
- ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳ ನಿರಂತರ ಅನುಷ್ಠಾನ, ನಿಗಾ ವಹಿಸುವುದು ಮತ್ತು ಪರಿಣಾಮಕಾರಿ ವ್ಯವಸ್ಥೆ ರೂಪಿಸುವಂತೆ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.
- ಹಜ್ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಇಂದು ಬೆಳಗ್ಗೆ 8.30ಕ್ಕೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮದೀನಾಕ್ಕೆ ತೆರಳಿದೆ. ಹಜ್ ಯಾತ್ರೆಗಾಗಿ ಜೂನ್ 16 ರವರೆಗೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7224 ಯಾತ್ರಾರ್ಥಿಗಳನ್ನು ಸಾಗಿಸಲು 20 ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ.