ಆಂಧ್ರಪ್ರದೇಶ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೊ ಮತ್ತೊಂದು ಇತಿಹಾಸ ಸೃಷ್ಟಿ ಮಾಡಿದೆ. ತನ್ನ ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್-04 ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣಾ ವಾಹಕ ಪಿಎಸ್‍ಎಲ್‍ವಿ-ಸಿ52, ಒಟ್ಟು ಮೂರು ಉಪಗ್ರಹಗಳನ್ನು ಹೊತ್ತು ಬೆಳಗ್ಗೆ 5.59ಕ್ಕೆ ನಭಕ್ಕೆ ಹಾರಿತು. ಇದರೊಂದಿಗೆ 2022ನೇ ಸಾಲಿನ ಹೊಸ ವರ್ಷದ ಮೊದಲ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದರೊಂದಿಗೆ ಪಿಎಸ್ ಎಲ್ ವಿ ಉಪಗ್ರಹ 54ನೇ ಬಾರಿಗೆ ಯಶಸ್ವಿಯಾಗಿ ಉಡಾವಣೆಗೊಂಡಾಂತಾಗಿದೆ. ಇಒಎಸ್-04 ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಕೃಷಿ ಚಟುವಟಿಕೆಗಳಿಗೆ ನೆರವು ನೀಡಲಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಕೊಲೊರಾಡೊ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಿರ್ಮಿಸಿರುವ ಇನ್‍ಸ್ಪಾಯರ್ ಸ್ಯಾಟ್-1 ಹಾಗೂ ಇಸ್ರೊದ ಲಘು ಉಪಗ್ರಹ ಐಎನ್‍ಸ್-2ಟಿಡಿ ಈ ಎರಡು ಉಪಗ್ರಹಗಳು ಕೂಡ ಇಂದು ಉಡಾವಣೆಯಾದವು.
ಉಪಗ್ರಹಗಳ ಯಶಸ್ವಿ ಉಡಾವಣೆಯ ಬಳಿಕ ಮಾತನಾಡಿದ ಇಸ್ರೋ ವಿಜ್ಞಾನಿಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಅಧ್ಯಾಯ ಸೃಷ್ಟಿ ಮಾಡಲಾಗಿದೆ. ಇಂದು ಬೆಳಗ್ಗೆ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಬಿಡಲಾಗಿದೆ. ಅದಕ್ಕಾಗಿ ಇಸ್ರೋ ತಂಡದ ಪ್ರತಿಯೊಬ್ಬ ಸದಸ್ಯರ ಸಹಕಾರ, ಪರಿಶ್ರಮ ಕಾರಣವಾಗಿದೆ. ಹಾಗೆಯೇ ತಾಂತ್ರಿಕ ಹಾಗೂ ಆಡಳಿತ ವರ್ಗದ ಸಿಬ್ಬಂದಿಯ ಸಹಕಾರದಿಂದ ಈ ಕಾರ್ಯ ಯಶಸ್ವಿಗೊಂಡಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
1710 ಕೆ.ಜಿ. ತೂಕದ ಇಒಎಸ್-04 ಉಪಗ್ರಹವನ್ನು 521 ಕಿಲೋ ಮೀಟರ್ ಧ್ರುವೀಯ ಕಕ್ಷೆಗೆ ಹಾರಿಬಿಡಲಾಯಿತು. ಈ ಉಪಗ್ರಹ ಎಲ್ಲ ರೀತಿಯ ಹವಾಮಾನ ಸ್ಥಿತಿಯಲ್ಲೂ ಅಧಿಕ ಗುಣಮಟ್ಟದ ದೃಶ್ಯಗಳನ್ನು ಸೆರೆಹಿಡಿಯಲಿದೆ. ಕೃಷಿ, ಅರಣ್ಯ, ತೋಟಗಳು, ಮಣ್ಣಿನ ತೇವಾಂಶ, ಜಲ ವಿಜ್ಞಾನ ಮತ್ತು ಪ್ರವಾಹದ ನಕಾಶೆ ರೂಪಿಸಲು ಇದು ನೆರವಾಗಲಿದೆ.
