ಮೈಸೂರು ದಸರಾ – 5G
- ಕರ್ನಾಟಕದಲ್ಲಿ ಕಳೆದ ಎರಡು ವರ್ಷದಿಂದ ಅತ್ಯಂತ ಸರಳವಾಗಿ ಆಚರಿಸಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಭಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದುಷ್ಟಶಕ್ತಿ ವಿರುದ್ಧ ಗೆಲುವಿನ ಸಂಕೇತವಾದ ವಿಜಯದಶಮಿಯನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
- ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಅಂಗವಾಗಿ ನಡೆಯಲಿರುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ನಡೆದಿವೆ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 2.30ಕ್ಕೆ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
- ಸಂಜೆ ನಡೆಯಲಿರುವ ಜಂಬೂ ಸವಾರಿಯ ಮೆರವಣಿಗೆಯಲ್ಲಿ 40ಕ್ಕೂ ಅಧಿಕ ಸ್ತಬ್ಧಚಿತ್ರಗಳು, ನಾಡಿನ ಹೆಸರಾಂತ ಕಲಾತಂಡಗಳು ಭಾಗವಹಿಸಲಿವೆ.
- ಜಂಬೂ ಸವಾರಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.
- ಆನಂತರ ಸಂಜೆ 7.30 ರಿಂದ ಬನ್ನಿಮಂಟಪ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ನಡೆಯಲಿದೆ. ಇದರೊಂದಿಗೆ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆಬೀಳಲಿದೆ.
- ವಿಜಯದಶಮಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ದೇಶದ ಜನತೆಗೆ ಶುಭ ಕೋರಿದ್ದಾರೆ.
- ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಪುನಾರಚನೆ ಮಾಡಲಾಗಿದ್ದು, ಕಾಂಗ್ರೆಸ್ ಮಹತ್ವದ ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸಮಿತಿಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಈ ಮೊದಲು ಗೃಹ ಸಮಿತಿಯ ನೇತೃತ್ವ ವಹಿಸಿದ್ದರು. ಇದೀಗ ಆ ಸ್ಥಾನ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್‌ಲಾಲ್ ಅವರಿಗೆ ಸಂದಿದೆ.
- ಮುಂದಿನ 500 ದಿನಗಳಲ್ಲಿ ದೇಶದಲ್ಲಿ 25 ಸಾವಿರ ದೂರ ಸಂಪರ್ಕ ಗೋಪುರಗಳ ಅಳವಡಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ದೆಹಲಿಯಲ್ಲಿ ನಿನ್ನೆ ರಾಜ್ಯಗಳ ಐಟಿಐಟಿ ಸಚಿವರ ಡಿಜಿಟಲ್ ಇಂಡಿಯಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಟವರ್‌ಗಳ ಅಳವಡಿಕೆಗೆ ಜಾಗಗಳನ್ನು ರಾಜ್ಯ ಸರ್ಕಾರಗಳ ಜೊತೆ ಸಮಾಲೋಚಿಸಿ ನಿರ್ಧರಿಸಲಾಗುವುದು. ಡಿಜಿಟಲ್ ಇಂಡಿಯಾದಲ್ಲಿ ಸಂಪರ್ಕ ಅತ್ಯಂತ ಪ್ರಮುಖವಾಗಿದ್ದು ಅದನ್ನು ಪಿಎಂ ಗತಿಶಕ್ತಿ ಯೋಜನೆಯಡಿ ದೇಶದ ಮೂಲೆ ಮೂಲೆಗೂ ತಲುಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

_CLICK to Follow us on DailyHunt