ಮೈಸೂರು:ನವರಾತ್ರಿ ಉತ್ಸವಗಳ ಕೊನೆಯ ದಿನವಾದ ಇಂದು ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ಸಡಗರ, ಸಂಭ್ರಮ, ವೇದಘೋಷಗಳ ನಡುವೆ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರಮನೆ ಆವರಣದ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಶುಭ ಮೀನಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುಷ್ಪಾಲಂಕೃತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಮೈಸೂರಿನ ಮೇಯರ್ ಸುನಂದಾ ಪಾಲನೇತ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದಾದ ಬಳಿಕ ಸಂಪ್ರದಾಯದಂತೆ 21 ಕುಶಾಲ ತೋಪುಗಳನ್ನು ಹಾರಿಸಲಾಯಿತು. ಮುಖ್ಯಮಂತ್ರಿಗಳಿಂದ ಪುಷ್ಪಾರ್ಚನೆ ಸ್ವೀಕರಿಸಿದ ನಂತರ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಗಜಗಾಂಭೀರ್ಯದಿಂದ ಹೆಜ್ಜೆ ಹಾಕಲು ಆರಂಭಿಸಿದ ಕೂಡಲೇ ನೆರೆದಿದ್ದ ಜನಸ್ತೋಮದಿಂದ ಹರ್ಷೋದ್ಗಾರಗಳು ಕೇಳಿ ಬಂದವು. ಅಂಬಾರಿ ಹೊತ್ತ ಅಭಿಮನ್ಯು ಜೊತೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರಾ ಆನೆಗಳು ಸಾಥ್ ನೀಡಿದವು. ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಾಲ ಸ್ವಾಮಿ, ಅಶ್ವತ್ಥಾಮ ಹೆಜ್ಜೆ ಹಾಕಿದವು. ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡು ಪ್ರವಾಸಿಗರೂ ಸೇರಿದಂತೆ ಮೈಸೂರಿನ ಜನತೆಯಿಂದ ಧನ್ಯತಾ ಭಾವ ಹೊರಹೊಮ್ಮಿತು. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಜಂಬೂ ಸವಾರಿಯನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಜಂಬೂ ಸವಾರಿ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಂಡಿತ್ತು.
ಜಂಬೂ ಸವಾರಿ ಮೆರವಣಿಗೆ ವೇಳೆ ವೀರಗಾಸೆ, ನಂದಿಕೋಲು, ಡೊಳ್ಳು ಕುಣಿತ , ಕಂಸಾಳೆ, ಮದ್ದಲೆ, ನಾದಸ್ವರ ಸೇರಿದಂತೆ ಮುಂತಾದ ಜಾನಪದ ಕಲಾ ತಂಡಗಳು ನೆರೆದಿದ್ದ ಜನರ ಮನಸೂರೆಗೊಂಡವು.
ಕೋವಿಡ್ ಹಿನ್ನೆಲೆಯಲ್ಲಿ ಸ್ತಬ್ಧ ಚಿತ್ರಗಳ ಸಂಖ್ಯೆಯು ಕಡಿಮೆಯಾಗಿತ್ತು. ಈ ಬಾರಿ ಕೇವಲ 6 ಸ್ತಬ್ದ ಚಿತ್ರಗಳ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಸ್ತಬ್ದಚಿತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆಯ ವಸತಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಲಸಿಕಾ ಅಭಿಯಾನದ ಮೂಲಕ ಕೋವಿಡ್ ಮುಕ್ತ ಕರ್ನಾಟಕದ ಗುರಿ, ಪ್ರಕೃತಿ ಸಂರಕ್ಷಣೆ , ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಕುರಿತು ತಿಳವಳಿಕೆ ನೀಡುವ ಸ್ತಬ್ಧ ಚಿತ್ರಗಳು ಜನರ ಮೆಚ್ಚುಗೆಗೆ ಕಾರಣವಾದವು. ಅರಮನೆ ವಾದ್ಯಗೋಷ್ಠಿಯನ್ನೊಳಗೊಂಡ ಆನೆ ಬಂಡಿ , ಪೊಲೀಸ್ ಬ್ಯಾಂಡ್, ವಿವಿಧ ಪೊಲೀಸ್ ಪಡೆಗಳಿಂದ ಪಥ ಸಂಚಲನ , ಅಶ್ವರೋಹಿದಳದ ಆಕರ್ಷಕ ಪಥಸಂಚಲನ ಮುಂತಾದವು ಕಣ್ಮನ ಸೆಳೆದವು. ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
