ಬೆಂಗಳೂರು: ೬೬ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣ್ಯ ಸೇವೆ ಸಲ್ಲಿಸಿದ ೧೦ ಸಂಘ-ಸಂಸ್ಥೆಗಳು ಸೇರಿದಂತೆ ೬೬ ಮಂದಿಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ನಿನ್ನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಸಂಸದರಾದ ತೇಜಸ್ವಿ ಸೂರ್ಯ, ಉಮೇಶ್ ಜಾಧವ್, ಸಚಿವರಾದ ಆರ್. ಅಶೋಕ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಶಾಸಕ ಉದಯ್ ಗರುಡಾಚಾರ್, ಪರಿಷತ್ ಸದಸ್ಯ ರಮೇಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇತ್ತೀಚಿಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿಗಳಾದ ಅಜ್ಜಂಪುರ ಮಂಜುನಾಥ್, ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ, ಪತ್ರಿಕರ್ತರಾದ ಪಟ್ನಂ ಅನಂತ ಪದ್ಮನಾಭ, ಯು.ಬಿ. ರಾಜಲಕ್ಷ್ಮಿ, ಹಿರಿಯ ನಟ ದೇವರಾಜ್, ಸಮಾಜ ಸೇವಕರಾದ ಸೂಲಗಿತ್ತಿ ಯಮುನವ್ವ, ಮುನಿಯಪ್ಪ ದೊಮ್ಮಲೂರು, ಶಿಲ್ಪಕಲಾವಿದ ಜಿ. ಜ್ಞಾನಾನಂದ, ಹಿರಿಯ ವಕೀಲ ಸಿ.ವಿ. ಕೇಶವಮೂರ್ತಿ, ಶಿಕ್ಷಣ ತಜ್ಞ ಪ್ರೊಫೆಸರ್ ಪಿ.ವಿ. ಕೃಷ್ಣಭಟ್, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ನಿರ್ದೇಶಕ ಮತ್ತು ನಟ ಪ್ರಕಾಶ್ ಬೆಳವಾಡಿ, ಕೋವಿಡ್ ತಾಂತ್ರಿಕ ಸಮಿತಿ ಸದಸ್ಯರಾಗಿದ್ದ ಡಾ. ಸುದರ್ಶನ್ ಸೇರಿ ೬೬ ಮಂದಿಗೆ ಮತ್ತು ಬೆಂಗಳೂರಿನ ಅದಮ್ಯ ಚೇತನ, ಮಂಗಳೂರಿನ ಶ್ರೀರಾಮಕೃಷ್ಣ ಆಶ್ರಮ, ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ ಸೇರಿದಂತೆ ೧೦ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಳಿಕ ಮುಖ್ಯಮಂತ್ರಿ, ೨೦೨೦-೨೧ನೇ ಸಾಲಿನ ಪ್ರಶಸ್ತಿಗೆ ಉತ್ತಮ ಸಾಧಕರನ್ನು ಗುರುತಿಸಿದ್ದಕ್ಕಾಗಿ ಆಯ್ಕೆ ಸಮಿತಿಯನ್ನು ಅಭಿನಂದಿಸಿದರು. ಕನ್ನಡ ನಾಡು ಸಮೃದ್ಧವಾದ ಸಂಪನ್ಮೂಲ ಹೊಂದಿದೆ. ವಿಜ್ಞಾನ-ತಂತ್ರಜ್ಞಾನದಂತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜದಿಂದ ಪಡೆದುಕೊಂಡಿದ್ದನ್ನು ಸಮಾಜಕ್ಕೆ ವಾಪಸ್ ನೀಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು. ಕನ್ನಡ ರಾಜ್ಯೋತ್ಸವವನ್ನು ಮುಂದಿನ ವರ್ಷದಿಂದ ಕನ್ನಡಿಗರ ಜನೋತ್ಸವವನ್ನಾಗಿ ಮಾಡಲಾಗುವುದು. ರಾಜ್ಯೋತ್ಸವ ಪ್ರಶಸ್ತಿಗಳ ಮೌಲ್ಯ ಹೆಚ್ಚಿಸಲು ಅರ್ಜಿ ಆಧಾರಿತ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ, ಶೋಧ ಮಾದರಿಯನ್ನು ಅನುಸರಿಸಲಾಗುವುದು. ಆಯ್ಕೆ ಸಮಿತಿ ಮತ್ತು ಸರ್ಕಾರ ೨ ತಿಂಗಳಿಗೂ ಮೊದಲೇ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಲಿವೆ ಎಂದರು. ನ್ಯಾಯಾಲಯಕ್ಕೆ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರ ವಯಸ್ಸನ್ನು ೬೦ ವರ್ಷ ವಯೋಮಿತಿಗಿಂತ ಕಡಿಮೆ ಮಾಡಲು ಅನುಮತಿ ಪಡೆಯಲಾಗುವುದು. ಪ್ರಶಸ್ತಿಯೊಂದಿಗೆ ನೀಡುವ ನಗದು ಪುರಸ್ಕಾರವನ್ನು ಒಂದರಿಂದ ೫ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕ ನಿರ್ಮಾಣದ ಮೂಲಕವೇ ಅಡಿಪಾಯ ಹಾಕಲು ನಮ್ಮ ಸರ್ಕಾರ ದಣಿವರಿಯದೆ ಶ್ರಮಿಸುತ್ತಿದೆ. ರಾಜ್ಯದಲ್ಲಿ ಶೇಕಡ ೩೫ ರಷ್ಟು ಮಂದಿ ಮಾತ್ರ ತಲಾ ಆದಾಯಕ್ಕೆ ಸೇರ್ಪಡೆಯಾಗಿದ್ದಾರೆ. ಉಳಿದ ಶೇಕಡ ೬೫ರಷ್ಟು ಮಂದಿ ಆದಾಯ ಗಳಿಕೆಯಿಂದ ಹೊರಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಮಹಿಳೆಯರಿದ್ದು, ದಿನನಿತ್ಯದ ಕೆಲಸದ ಬಳಿಕ ಮಹಿಳೆಯರಿಗೆ ಆದಾಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಸೂಕ್ತ ಮಾರುಕಟ್ಟೆ ಒದಗಿಸಲಾಗುವುದು. ಈ ಮೂಲಕ ಎಲ್ಲರೂ ತಲಾ ಆದಾಯ ಚಟುವಟಿಕೆಗೆ ಸೇರ್ಪಡೆಯಾದರೆ, ಅಭಿವೃದ್ಧಿ ವೇಗ ಪಡೆಯಲಿದೆ ಎಂದರು.
