ಉತ್ತರ ಪ್ರದೇಶ :ಪ್ರಧಾನಿ ನರೇಂದ್ರ ಮೋದಿ ಇಂದು ಬಲ್‌ರಾಂಪುರ್‌ದ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮರ್ಪಕ ನೀತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡಾಗ ಮಾತ್ರ ಯಾವುದೇ ಯೋಜನೆ ಪೂರ್ಣಗೊಂಡು ಅದರ ಸವಲತ್ತುಗಳು ಜನರಿಗೆ ದೊರಕಲು ಸಾಧ್ಯ ಎಂದರು. ಐದು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸರಯೂ ಕಾಲುವೆ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಯೋಜನೆಯ ಸೌಲಭ್ಯಗಳನ್ನು ಜನರಿಗೆ ನೀಡುವಂತೆ ಮಾಡಿದೆ. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಎರಡೂ ಸೇರಿ ಡಬಲ್ ಎಂಜಿನ್ ಸರ್ಕಾರಗಳು ಈ ಯೋಜನೆಯನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಹೇಳಿದರು.

ದೇಶದ ಪ್ರಗತಿಯಲ್ಲಿ ನೀರು ಉಳಿತಾಯವು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನದಿಗಳ ನೀರಿನ ಸದ್ಬಳಕೆ ಆಗಬೇಕು, ರೈತರಿಗೆ ಕೃಷಿ ಮಾಡಲು ಸೂಕ್ತ ರೀತಿಯಲ್ಲಿ ನೀರು ಲಭಿಸುವಂತಾಗಬೇಕು. ಈ ಕಾರಣದಿಂದಲೇ ನಮ್ಮ ಸರ್ಕಾರ ನೀರು ರಕ್ಷಣೆ ಮತ್ತು ಅದರ ಸದ್ಬಳಕೆಗೆ ಆದ್ಯತೆಯನ್ನು ನೀಡಿದೆ ಎಂದರು, ನಾನು ಹಲವಾರು ಸರ್ಕಾರಗಳ ಕಾರ್ಯವೈಖರಿಯನ್ನು ನೋಡಿದ್ದೇನೆ. ಅವುಗಳು ಜಾರಿಗೆ ತಂದಿದ್ದ ಯೋಜನೆಗಳು ಜಾರಿಗೆ ಬರುವಲ್ಲಿ ಆಗುತ್ತಿದ್ದ ವಿಳಂಬವನ್ನು ಕಂಡು ನನ್ನ ಮನಸ್ಸಿಗೆ ಹೆಚ್ಚು ನೋವುಂಟಾಗುತ್ತಿತ್ತು. ಸರ್ಕಾರದ ಹಣ, ಸಮಯ, ಸೌಲಭ್ಯಗಳು ದುರುಪಯೋಗ ಆಗುತ್ತಿತ್ತು. ಇಂತಹ ಕಾರ್ಯವೈಖರಿಗಳು ದೇಶದ ಪ್ರಗತಿಗೆ ಹಿನ್ನಡೆಯನ್ನು ಉಂಟು ಮಾಡುತ್ತಿದ್ದವು. ಆದರೆ, ನಮ್ಮ ಸರ್ಕಾರ ಕಾಲಮಿತಿಯನ್ನು ಹಾಕಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು. ಈ ತಿಂಗಳು 16 ರಂದು ಪ್ರಾಕೃತಿಕ ಕೃಷಿಯ ಬಗ್ಗೆ ಮಹತ್ವದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸುತ್ತಿದೆ. ಇದರಲ್ಲಿ ಶೂನ್ಯ ಬಂಡವಾಳ ಸೇರಿದಂತೆ ಸಹಜ ಕೃಷಿಯ ಬಗ್ಗೆ ಹಲವಾರು ವಿಚಾರ ಮಂಥನವಾಗಲಿವೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರೈತರು ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದರು.

ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಮತ್ತು ಇತರೆ ಸೇನಾಧಿಕಾರಿಗಳು ಕಳೆದುಕೊಂಡು ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ರಾವತ್ ಅವರು ಮೂರು ಸೇನಾಪಡೆಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಲು, ಅವುಗಳನ್ನು ಆತ್ಮನಿರ್ಭರವನ್ನಾಗಿ ಮಾಡಲು ಸಾಕಷ್ಟು ಶ್ರಮವಹಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಗುಣಗಾನ ಮಾಡಿದರು. ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅವರ ಸಂಪುಟದ ಸಹೋದ್ಯೋಗಿಗಳು ಪಾಲ್ಗೊಂಡಿದ್ದರು.
“ಸರ್ಕಾರದ ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲಿಸಿ, ಇದು ಸ್ಕೈ ನ್ಯೂಸ್ ಕಳಕಳಿ”