ಬಳ್ಳಾರಿ: ಸ್ಥಳಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿನ್ನೆ ಉದ್ಘಾಟಿಸಿದರು. ಬಳಿಕ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪದಕ ಹಾಗೂ ಪದವಿ ಪ್ರದಾನ ಮಾಡಿದರು.
ಇದೇ ವೇಳೆ ಕೃಷಿ ಕ್ಷೇತ್ರದ ಸೇವೆಗಾಗಿ ರಾಯಚೂರಿನ ಕವಿತಾ ಮಿಶ್ರಾ ಹಾಗೂ ಸಂಗೀತ ಕ್ಷೇತ್ರದ ಸೇವೆಗಾಗಿ ಪಂಡಿತ್ ಎಂ. ವೆಂಕಟೇಶ್ ಅವರಿಗೆ ಡಾಕ್ಟರೇಟ್, ಸಮಾಜ ಸೇವೆಗಾಗಿ ಹಿರೇಹಾಳ್ ಇಬ್ರಾಹಿಂ ಸಾಬ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಬಳಿಕ ಥಾವರ್ ಚಂದ್ ಗೆಹ್ಲೋಟ್, ಶಿಕ್ಷಣದ ಉದ್ದೇಶ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಬದಲಾವಣೆಯ ಪ್ರೇರಕ ಶಕ್ತಿಯಾಗಬೇಕು, ಸಮೃದ್ಧ ಜೀವನವನ್ನು ನಡೆಸಲು ಶಿಕ್ಷಣ ಅತ್ಯಗತ್ಯ. ಯುವ ಜನರು ತಮ್ಮ ಶೈಕ್ಷಣಿಕ ಜ್ಞಾನವನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕೆಂದು ತಿಳಿಸಿದರು.
ಡಾ.ಜೆ.ಕೆ ಬಜಾಜ್, ದೇಶದಲ್ಲಿ ಸಮಾಜಿಕ ಬದಲಾವಣೆಯಾಗಬೇಕಾದರೆ ಇಂದಿನ ಯುವ ಜನತೆಗೆ ದೇಶ, ಪರಂಪರೆ ಹಾಗೂ ವೈವಿಧ್ಯತೆಗಳ ಅರಿವು ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿದ್ದು ಆಲಗೂರು, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಅಧ್ಯಕ್ಷ ಡಾ.ಜೆ.ಕೆ ಬಜಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.