ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಈ ಚಿತ್ರಣ ಯಾವುದೊ ಕುಗ್ರಾಮದ್ದಲ್ಲ, ಬದಲಿಗೆ ಲಿಂಗಸಗೂರು ಪುರಸಭೆ ವ್ಯಾಪ್ತಿಯ ವಾರ್ಡ್ ಸಂ.07 ರ ರಸ್ತೆಯ ದುಸ್ಥಿತಿ. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬರುವ, ಶ್ರೀ ಕೃಷ್ಣ ಆಗ್ರೋ ಎದುರಿಗಿನ ಜನತಾ ವಾರ್ಡ್ ಇದಾಗಿದ್ದು, ಮಳೆಯಲ್ಲಿ ಕೆಸರಿನಿಂದ ಹದಗೆಡುವ ನಿತ್ಯ ನಡೆದಾಡುವ ರಸ್ತೆ, ಆ ರಸ್ತೆಯ ಒಂದು ಬದಿಯಲ್ಲಿ ನೀರಿನ ಟ್ಯಾಂಕ್ (ಗುಮ್ಮಿ) ಹಾಗೂ ರಸ್ತೆ ಮಧ್ಯದಲ್ಲಿ ಬೆಳೆದ ಬೃಹತ್ ಮರ.

“ಸಾಂಕ್ರಾಮಿಕ ರೋಗಗಳ ಬೀತಿ ಒಂದೆಡೆಯಾದರೆ, ಮಳೆಯಲ್ಲಿ ಕೆಸರಿನಿಂದ ಕೂಡಿದ ನಿತ್ಯ ತಿರುಗಾಡುವ ರಸ್ತೆಯು ಹದಗೆಡುವುದು ಒಂದೆಡೆಯಾಗಿದೆ, ರಸ್ತೆ ಮಧ್ಯದಲ್ಲಿ ಬೆಳೆದು ನಿಂತ ಬೃಹತ್ ಮರವು ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಆಸ್ಪತ್ರೆ ಅಥವಾ ಪಟ್ಟಣದ ಯಾವುದೇ ಕೆಲಸಕ್ಕೆ ಅಥವಾ ಸಾಮಾಗ್ರಿ ಸರಂಜಾಮು ಸಾಗಾಟಕ್ಕೆ ತ್ರಿಚಕ್ರ ವಾಹನದಾರರು ತೊಂದರೆ ಅನುಭವಿಸುವಂತಾಗಿದೆ. ಆಟೋಗಳಿಗೆ ವಿನಂತಿಸಿದರೂ ಕೂಡಾ ಬರಲಾರದ ಸ್ಥಿತಿ ಏಕೆಂದರೆ ರಸ್ತೆ ಮಧ್ಯದಲ್ಲಿರುವ, ಸಣ್ಣ ವಾಹನ ಓಡಾಟಕ್ಕೆ ಅಡ್ಡಿಯಾಗಿರುವ ಬೃಹತ್ ಮರ” ಎಂಬುದು ಸದರಿ ವಾರ್ಡಿನ ನಿವಾಸಿಗರ ಸಧ್ಯದ ಸ್ಥಿತಿಯ ಅಂಬೋಣವಾಗಿದೆ.

ರಸ್ತೆಗೆ ಹೊಂದಿಕೊಂಡಂತೆ ವಾಸವಿರುವ ನಾವು ಹಾಗೂ ಇಲ್ಲಿ ಮನೆಗಳಾಗಿ ಸುಮಾರು 15-20 ವರ್ಷಗಳು ಕಳೆದರೂ ವಾಸವಾಗಿರುವ ಜನರು ಓಡ್ಯಾಡಲು ಸರಿಯಾದ ರಸ್ತೆಗಳ ನಿರ್ಮಾಣ ಆಗದೇ, ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಇರುವ ಪರಸ್ಥಿತಿ ಉಂಟಾಗಿದೆ, ಈ ದುಸ್ಥಿತಿಯ ಸುಧಾರಣೆಯೊಂದಿಗೆ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಸದರಿ ವಾರ್ಡಿನ ಚುನಾಯಿತ ಸದಸ್ಯರ ಗಮನಕ್ಕೆ ಸುಮಾರು ಒಂದು ತಿಂಗಳಿನಿಂದ ಗಮನಕ್ಕೆ ತಂದಿದ್ದಾಗಿಯೂ ಗಮನ ಹರಿಸುತ್ತಿಲ್ಲ ಎಂಬುದು ನಿವಾಸಿಗರ ವಾದ ಹಾಗೂ ಬೃಹತ್ ಮರದ ತೆರವಿಗೆ ಲಿಂಗಸಗೂರು ವಲಯ ಅರಣ್ಯಾಧಿಕಾರಿ ಅವರಿಗೆ ಮನವಿಯೊಂದಿಗೆ ತಿಳಿಸಿದ್ದಾಗಿಯೂ ತೆರವಿಗೆ ಸಾಕಷ್ಟು ಕಾಲಾವಕಾಶದ ಅವಧಿಯ ಉತ್ತರ ನೀಡಿರುತ್ತಾರೆ,

ಮಕ್ಕಳು – ಮಹಿಳೆಯರು ಸದರಿ ನೀರಿನ ಟ್ಯಾಂಕಿನಿಂದ ನೀರಿನ ಸಲುವಾಗಿ-ನಿತ್ಯ ಓಡಾಟಕ್ಕಾಗಿ ಹಾಗೂ ಅಗತ್ಯ ಇದ್ದಾಗ ವಯಸ್ಸಾದವರೂ ಕೂಡಾ ಮುಖ್ಯ ರಸ್ತೆವರೆಗೂ ನಡೆಯುತ್ತಾ ಬಂದು ಆಟೋ ಅಥವಾ ಇನ್ನಾವುದೋ ವಾಹನದ ಮೂಲಕ ಸಾಗುವ ಅನಾನುಕೂಲ ಇರವುದರಿಂದ ಸಂಬಂಧಿಸಿದ ವಾರ್ಡಿನ ಚುನಾಯಿತ ಸದಸ್ಯರು, ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸದರಿ ಸಮಸ್ಯಗಳಿಗೆ-ತೊಂದರೆಗಳಿಗೆ ಸ್ಪಂದಿಸಿ, ಸದರಿ ಅನಾನುಕೂಲಗಳನ್ನು ಪರಿಹರಿಸಿ ಎಂದು ನಿವಾಸಿಗರ ಒತ್ತಾಯವಾಗಿದೆ.