ಲಿಂಗಸಗೂರು: ಜನಸಾಮಾನ್ಯರು ಓಡಾಡುವ ಬಸ್ಸುಗಳನ್ನು ಹೆಚ್ಚು ಸೂಸಜ್ಜಿತಗೊಳಿಸಿ ಸುಗಮವಾದ ಸಾರಿಗೆ ಯತ್ನಿಸಲಾಗುವುದಲ್ಲದೆ ಮುಂಬರುವ ದಿನಗಳಲ್ಲಿ ಹವಾ ನಿಯಂತ್ರಿತ ಬಸ್ಸುಗಳನ್ನು ಓಡಿಸಲಾಗುವುದೆಂದು ಸಚಿವ ಶ್ರೀರಾಮುಲು ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವತಿಯಿಂದ ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು, “ರಾಜ್ಯದಲ್ಲಿ ನಿತ್ಯವೂ ಸುಮಾರು ಮೂರು ಕೋಟಿಗಳಷ್ಟು ಜನರು ಸಾರಿಗೆ ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ, ಖಾಸಗಿ ಬಸ್ಸುಗಳಲ್ಲಿ ಅವರಿಗೆ ಸಂಚರಿಸಲು ಸಾಧ್ಯವಿಲ್ಲದಾಗಿದೆ ಹಾಗಾಗಿ ನಮ್ಮ ಸಾರಿಗೆ ಬಸ್ಸುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಿ ಹವಾ ನಿಯಂತ್ರಿತ ಬಸ್ಸುಗಳ ಸಂಚಾರಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ, ಕಲ್ಯಾಣ ಕರ್ನಾಟಕದ ಭಾಗಕ್ಕೆ ಸುಮಾರು ಏಳರಿಂದ ಎಂಟು ವೋಲ್ವೋ ಬಸ್ಸುಗಳನ್ನು ಒದಗಿಸಲಾಗುವುದು, ಲಿಂಗಸಗೂರು ಇಂದ ಬೆಂಗಳೂರಿಗೆ ಸಂಚರಿಸಲು ಎರಡು ಹವಾ ನಿಯಂತ್ರಿತ ಬಸ್ಸುಗಳನ್ನು ನೀಡಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸ್ಥಳೀಯ ಶಾಸಕರಾದ ಡಿಎಸ್ ಹೂಲಿಗೇರಿಯವರು ” ಲಿಂಗಸ್ಗೂರಿನಲ್ಲಿ ಬಸ್ಸುಗಳ ಕೊರತೆ ಸಾಕಷ್ಟು ಇದ್ದು ಕೂಡಲೇ 50 ಬಸ್ಸುಗಳನ್ನು ಪೂರೈಸಲು, ಮುಂಬರುವ ದಿನಗಳಲ್ಲಿ ಆರ್ ಟಿ ಓ ಕಚೇರಿಯನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಅವಿನಾಶ ಸಿಂಧೆ, ತಹಸೀಲ್ದಾರರಾದ ಬಲರಾಮ ಕಟ್ಟಿಮನಿ, ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ಮಹಮ್ಮದ್ ಫಯಾಜ್, ಪುರಸಭೆಯ ಅಧ್ಯಕ್ಷೆ ಶ್ರೀಮತಿ ಸುನಿತಾ ಕೆಂಭಾವಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್ ಕುಲಕರ್ಣಿ, ಉಪಾಧ್ಯಕ್ಷ ಮಹಮ್ಮದ್ ರಫಿ, ಸ್ಥಳೀಯ ಮುಖಂಡರಾದ ಶರಣಪ್ಪ ಮೇಟಿ, ಶರಣಬಸವ ಮೇಟಿ, ಆದಪ್ಪ ಮನಗೂಳಿ ಸೇರಿದಂತೆ ಅನೇಕ ಹಿರಿಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು.