ಕಾಸರಗೋಡು: ಉತ್ತಮ ಪರಿಸರದ ಶಿಕ್ಷಣ ಕೇಂದ್ರಗಳಲ್ಲಿ ಕಲ್ಪನೆಗಳು ರೂಪುಗೊಳ್ಳುತ್ತವೆ, ಬೋಧನೆ – ಕಲಿಕೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಪರಿಸರ ಚೈತನ್ಯಶೀಲವಾಗುತ್ತದೆ ಚಿಂತನೆಗಳು ಅರಳಿ, ಹೊಸ ಕಲ್ಪನೆಗೆ ನಾಂದಿ ಹಾಡುತ್ತವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಕಾಸರಗೋಡಿನಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಉತ್ತಮ ಪರಿಸರದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ತಾವು ಕಂಡ ಜೀವಂತಿಕೆ ಮತ್ತು ಚೈತನ್ಯ ಸಾಮಾಜಿಕ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು. ದೇಶವನ್ನು ಮತ್ತು ಸಮಾಜವನ್ನು ಸಬಲೀಕರಿಸಲು ನಿರಂತರ ಜ್ಞಾನ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಶಿಕ್ಷಣದ ಉತ್ತೇಜನಕ್ಕೆ ಸರ್ಕಾರ ಸೂಕ್ತ ಶೈಕ್ಷಣಿಕ ಪರಿಸರ ರೂಪಿಸಬೇಕು. ಅದರಲ್ಲಿ ಯುವ ಮನಸ್ಸುಗಳು ಸೃಜನಶೀಲತೆಯಿಂದ ಅರಳಬೇಕು ಎಂದು ಬಯಸಿದರು.

ಇದಕ್ಕೂ ಮುನ್ನ ತಮ್ಮ ನಾಲ್ಕು ದಿನಗಳ ಕೇರಳ ಭೇಟಿಗಾಗಿ ಕೊನ್ನೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಆರಿಫ್ ಮೊಹಮದ್ ಖಾನ್, ಸಚಿವ ಎಂ.ವಿ. ಗೋವಿಂದನ್ ಸ್ವಾಗತಿಸಿದರು. ನಾಳೆ ರಾಷ್ಟ್ರಪತಿಯವರು ಕೊಚ್ಚಿಯಲ್ಲಿ ದಕ್ಷಿಣ ನೌಕಾ ಕಮಾಂಡ್ ನ ಕಾರ್ಯಾಚರಣೆ ಕ್ಷಮತೆಯನ್ನು ವೀಕ್ಷಿಸಲಿದ್ದಾರೆ. ನಾಡಿದ್ದು ಅವರು, ತಿರುವನಂತಪುರಂನಲ್ಲಿ ಮಾಜಿ ಮುಖ್ಯಮಂತ್ರಿ ಪಿ.ಎನ್. ಪಣಿಕ್ಕರ್ ಅವರ ಪ್ರತಿಮೆಯ ಅನಾವರಣ ಮಾಡಲಿದ್ದಾರೆ.
