Thursday, February 20, 2025
Homeಕರ್ನಾಟಕರಾಷ್ಟ್ರದೆಲ್ಲೆಡೆ ಇಂದು 73ನೇ ಗಣರಾಜ್ಯೋತ್ಸವದ ಸಂಭ್ರಮ : ದೆಹಲಿಯ ರಾಜಪಥದಲ್ಲಿ ನಡೆದ ಪ್ರಧಾನ ಸಮಾರಂಭ !

ರಾಷ್ಟ್ರದೆಲ್ಲೆಡೆ ಇಂದು 73ನೇ ಗಣರಾಜ್ಯೋತ್ಸವದ ಸಂಭ್ರಮ : ದೆಹಲಿಯ ರಾಜಪಥದಲ್ಲಿ ನಡೆದ ಪ್ರಧಾನ ಸಮಾರಂಭ !

ದೆಹಲಿ: ದೇಶ ಇಂದು 73ನೇ ಗಣರಾಜ್ಯೋತ್ಸವ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿ, 887 ಫೀಲ್ಡ್ ರೆಜಿಮೆಂಟ್ ನಿಂದ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ 2020ರಲ್ಲಿ ಶ್ರೀನಗರದಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಅಪ್ರತಿಮ ಧೈರ್ಯ ಹಾಗೂ ಶೌರ್ಯ ಮೆರೆದ ಜಮ್ಮು- ಕಾಶ್ಮೀರ ಪೊಲೀಸ್ ಎ ಎಸ್ ಐ. ಬಾಬು ರಾಮ್ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ಹುತಾತ್ಮ ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಪುತ್ರ ರಾಷ್ಟ್ರಪತಿಗಳಿಂದ ಪದಕವನ್ನು ಸ್ವೀಕರಿಸಿದರು.

ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ದೇಶದ ಪರವಾಗಿ ಪುಷ್ಪನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವ ಪಥ ಸಂಚಲನ ಕಾರ್ಯಕ್ರಮ ಆರಂಭಗೊಂಡಿತು. ರಾಜಪಥ್ ನಲ್ಲಿ ನಡೆದ ರಕ್ಷಣಾ ಸಚಿವಾಲಯದ ಪರಿಕಲ್ಪನೆಯಂತೆ ಹೊಸ ಕಾರ್ಯಕ್ರಮಗಳು ನಡೆದವು. ಸಾಮಾನ್ಯವಾಗಿ ಪಥಸಂಚಲನ ವೀಕ್ಷಿಸಲು ಸಾಧ್ಯವಾಗದ ಸಮಾಜದ ವಿವಿಧ ವರ್ಗಗಳಿಗೆ ಈ ಬಾರಿ ಅವಕಾಶ ಮಾಡಿಕೊಡಲಾಗಿತ್ತು. ಆಟೋ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಸಫಾಯಿ ಕರ್ಮಚಾರಿಗಳೂ ಹಾಗೂ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಪಥಸಂಚಲನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿಯ ಪರೇಡ್ ನಲ್ಲಿ ಹೊಸತನ ಹಾಗೂ ಬದಲಾವಣೆಗಳು ಕಂಡು ಬಂದವು. ಒಟ್ಟಾರೆ ಗಣರಾಜ್ಯೋತ್ಸವ ಮೊದಲಿಗಿಂತ ಹೆಚ್ಚು ಅದ್ಬುತವಾಗಿ ಕಂಗೊಳಿಸಿತು.

ರಾಜಪಥದಲ್ಲಿ ಭಾರತದ ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅನಾವರಣಗೊಂಡಿತು. ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಕಳೆದ ಬಾರಿಯಂತೆ ಈ ವರ್ಷವೂ ಯಾವುದೇ ಮುಖ್ಯ ಅತಿಥಿಗೆ ಆಹ್ವಾನ ನೀಡಿರಲಿಲ್ಲ. ಪಥಸಂಚಲನದಲ್ಲಿ ಸೇನೆಯ 6, ನೌಕಾಪಡೆ ಹಾಗೂ ವಾಯುಪಡೆಯ ತಲಾ 1, ಕೇಂದ್ರೀಯ ಸಶಸ್ತ್ರ ಪಡೆಗಳ 4, ದೆಹಲಿ ಪೊಲೀಸ್ ನ ಒಂದು, ಎನ್ ಸಿಸಿಯ 2, ರಾಷ್ಟ್ರೀಯ ಸೇವಾ ಯೋಜನೆಯ ಒಂದು ಸೇರಿದಂತೆ ಒಟ್ಟು 16 ತುಕಡಿಗಳು ಭಾಗಿಯಾಗಿದ್ದವು. ಲೆಫ್ಟಿನೆಂಟ್ ಮನಿಶಾ ವೋಹ್ರಾ ಸೇನಾ ಶಸ್ತಾಸ್ತ್ರ ಪಡೆಯ ತುಕಡಿಯ ನಾಯಕತ್ವ ವಹಿಸಿದ್ದರು. ಪುರುಷರನ್ನೇ ಒಳಗೊಂಡಿರುವ ಸೇನಾ ಶಸ್ತಾಸ್ತ್ರ ಪಡೆಯ ತುಕಡಿಯನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಾಯಕತ್ವ ವಹಿಸಿರುವುದು ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು. ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆಯ 75 ವಿಮಾನಗಳು, ಭವ್ಯ ಫ್ಲೈ-ಫಾಸ್ಟ್ ನಡೆಸಿದವು. ಯುದ್ಧ ವಿಮಾನಗಳಾದ ರಫೇಲ್, ಸುಖೋಯ್, ಜಾಗರ್, ಎಂ.ಐ.-17, ಸಾರಂಗ್, ಅಪಾಚೆ ಹಾಗೂ ಡೊಕೊಟಾ ವಿವಿಧ ರೀತಿಯಲ್ಲಿ ಚಿತ್ತಾಕರ್ಷಕ ಪ್ರದರ್ಶನ ನೀಡಿದವು. ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ಸ್ಪರ್ಧಿಗಳು ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಪ್ರತಿ 75 ಮೀಟರ್ ಅಂತರದಲ್ಲಿ 10 ದೊಡ್ಡ ಎಲ್ ಇಡಿ ಪರದೆ ಅಳವಡಿಸುವ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳವನ್ನು ದೂರ ಕುಳಿತಿರುವವರು ಸ್ಪಷ್ಟವಾಗಿ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸಚಿವಾಲಯಗಳ 12 ಸ್ತಬ್ಧ ಚಿತ್ರಗಳು ಪಥಸಂಚಲನದ ಮೆರುಗನ್ನು ಹೆಚ್ಚಿಸಿದವು. ಮಹಾರಾಷ್ಟ್ರದ ಜೀವ ವೈವಿಧ್ಯ, ಕರ್ನಾಟಕದ ಸಾಂಪ್ರದಾಯಕ ಕರಕುಶಲ ವೈಭವ, ಕಾಶಿ ವಿಶ್ವನಾಥಧಾಮ, ಮೇಘಾಲಯ ರಾಜ್ಯಕ್ಕೆ 50 ವರ್ಷ ತುಂಬಿದ ಸಂಭ್ರಮ, ಸ್ವತಂತ್ರ ಹೋರಾಟಕ್ಕೆ ಪಂಜಾಬ್ ಕೊಡುಗೆ, ರಾಷ್ಟ್ರೀಯ ಶಿಕ್ಷಣ ನೀತಿ, ಶ್ರೀ ಅರವಿಂದೋಗೆ 150 ವರ್ಷಗಳ ಸಂಭ್ರಮದ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆದವು. ಹರಿಯಾಣದ ಸ್ತಬ್ಧ ಚಿತ್ರದ ಘೋಷವಾಕ್ಯ, “ಕ್ರೀಡೆಯಲ್ಲಿ ನಾವು ನಂಬರ್ 1” ಎಂಬುದಾಗಿತ್ತು. ಪಥ ಸಂಚಲನ ಕಾರ್ಯಕ್ರಮ ರಾಷ್ಟ್ರಗೀತೆ ಹಾಗೂ ತ್ರಿವರ್ಣ ಬಲೂನುಗಳ ಬಿಡುಗಡೆಯೊಂದಿಗೆ ಸಮಾಪನಗೊಂಡಿತು. ಈ ದಿನವನ್ನು ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ದಿನವಾಗಿದೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news