ರಾಜ್ಯದಲ್ಲಿ ಮುಂಗಾರು ತೀವ್ರಗೊಂಡಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಕರಾವಳಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಶ್ಚಿಮಘಟ್ಟದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಕುಮಾರಪರ್ವತದ ಸುಬ್ರಹ್ಮಣ್ಯ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಮಾರಧಾರ – ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ, ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ಸೇತುವೆ ಸಹ ಮುಳುಗಡೆಯಾಗಿದೆ. ದರ್ಪಣ ತೀರ್ಥ ಸೇತುವೆಯಿಂದ ಸುಮಾರು 200 ಮೀಟರ್ ದೂರದವರೆಗೆ ಹೆದ್ದಾರಿ ರಸ್ತೆ ಜಲಾವೃತವಾಗಿದೆ.
ಆಗುಂಬೆ ಘಾಟ್ ನಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಘಾಟ್ ನ 11 ಹಾಗೂ 12ನೇ ತಿರುವಿನಲ್ಲಿ ಉಂಟಾಗಿರುವ ಬಿರುಕು ಹಾಗೂ ರಸ್ತೆ ಕುಸಿತವನ್ನು ಪರಿಶೀಲಿಸಿದರು. ಆದಷ್ಟು ಬೇಗ ದುರಸ್ಥಿ ಕಾರ್ಯ ಕೈಗೊಂಡು, ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಈ ಮಧ್ಯೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, K R S ಜಲಾಶಯ ಬಹುತೇಕ ಭರ್ತಿಯಾಗಿದೆ. K R S ನ ಗರಿಷ್ಠ ಮಟ್ಟ 124 .80 ಅಡಿಯಿದ್ದು, 122.05 ಅಡಿ ಭರ್ತಿಯಾಗಿದೆ. K R S ನ ಒಳ ಹರಿವು 31 ಸಾವಿರದ 791 ಕ್ಯೂಸೆಕ್ ಇದ್ದು, 13 ಸಾವಿರದ 511 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇಂದಿನಿಂದ 25 ಸಾವಿರದಿಂದ 75 ಸಾವಿರ ಕ್ಯೂಸೆಕ್ ವರೆಗೆ ನೀರು ಹೊರಬಿಡಲಾಗುವುದು. ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿನ ಸಾರ್ವಜನಿಕರು, ತಮ್ಮ ಆಸ್ತಿ – ಪಾಸ್ತಿ, ಜಾನುವಾರುಗಳ ರಕ್ಷಣೆ ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ K R S ನ ಕಾರ್ಯಪಾಲ ಅಭಿಯಂತರರು ತಿಳಿಸಿದ್ದಾರೆ. ಈ ನಡುವೆ, ರಂಗನತಿಟ್ಟು ಪಕ್ಷಿಧಾಮದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು, ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಕಬಿನಿ ಮತ್ತು ಹಾರಂಗಿ ಜಲಾಶಯಗಳಿಗೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಈ ಮಧ್ಯೆ, ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಪಿಲಿ ಕುಳ ಜೈವಿಕ ಉದ್ಯಾನದಲ್ಲಿ ನೀರು ನುಗ್ಗಿದ ಪರಿಣಾಮ ಪ್ರಾಣಿಗಳು ತೀವ್ರ ತೊಂದರೆ ಗೊಳಗಾಗಿದ್ದು, ಉದ್ಯಾನವನದ ಪ್ರವೇಶವನ್ನು ನಿಷೇಧಿಸಲಾಗಿದೆ.
ಬೀದರ್, ಕಲಬರುಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ನಿನ್ನೆ 15.4 ಮಿಲಿ ಮೀಟರ್ ಮಳೆಯಾಗಿದೆ.
–ʼಗೂಗಲ್ ನ್ಯೂಸ್ʼ ನಲ್ಲಿ ಫಾಲೋಮಾಡಲು ಕ್ಲಿಕ್ಕಿಸಿ