ಬೆಂಗಳೂರು: ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ 59ನೇ ಅಖಿಲ ಭಾರತ ಶಾಸ್ತ್ರೀಯ ಸ್ಪರ್ಧೆಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಬಳಿಕ ಥಾವರ್ ಚಂದ್ ಗೆಹ್ಲೋಟ್, ಭಾರತೀಯ ಇತಿಹಾಸ, ತತ್ವಶಾಸ್ತ್ರ, ಸಂಸ್ಕೃತಿ, ಕಲೆ ಮತ್ತು ಸೌಂದರ್ಯ ಶಾಸ್ತ್ರದ ಪುನರ್ ನಿರ್ಮಾಣವನ್ನು ಸಂಸ್ಕೃತ ಶಿಕ್ಷಣ ಸಂಶೋಧನೆಯಿಂದ ಸಾಧಿಸಬಹುದು. ಶೈಕ್ಷಣಿಕ ಶಾಖೆಗಳ ಒಟ್ಟಾರೆ ಬೆಳವಣಿಗೆಗೆ ಸಂಸ್ಕೃತದ ಕೊಡುಗೆ ಅಪಾರ ಎಂದರು. ಧರ್ಮಗ್ರಂಥ ಹಾಗೂ ಸಂಸ್ಕೃತ ಜ್ಞಾನ ಪರಂಪರೆಯ ಪ್ರಚಾರಕ್ಕೆ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸುವುದು ಅಗತ್ಯವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕೃತ ಅಧ್ಯಯನದ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.
ಇಂದಿನಿಂದ ನಾಲ್ಕು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶದ ಹಲವು ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪರಮೇಶ್ವರ ನಾರಾಯಣಶಾಸ್ತ್ರಿ, ಉಪ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪ ಕುಲಪತಿ ಕೆ.ಇ. ದೇವನಾಥನ್ ಮತ್ತಿತರರು ಉಪಸ್ಥಿತರಿದ್ದರು.