ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ರಾಷ್ಟ್ರ ಮಟ್ಟದ ಬಹುರಾಜ್ಯ ಬೀಜ ಸಹಕಾರಿ ಸಂಘ ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸುದ್ದಿಗೋಷ್ಟಿಯಲ್ಲಿ, ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ-2022ರ ಅಡಿ ನೂತನ ಸಂಘವನ್ನು ಸ್ಥಾಪನೆ ಮಾಡಲಾಗುವುದು. “ಸಹಕಾರದಿಂದ ಸಮೃದ್ಧಿ’ ಗುರಿಸಾಧನೆಗೆ ಇದು ಅನುಕೂಲ ಕಲ್ಪಿಸಲಿದೆ. ಗುಣಮಟ್ಟದ ಬೀಜಗಳ ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಬ್ರ್ಯಾಂಡಿಂಗ್, ದಾಸ್ತಾನು, ಪ್ರಚಾರ ಮತ್ತು ವಿತರಣೆಗೆ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ದೇಶೀಯ ನೈಸರ್ಗಿಕ ಬೀಜಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ದೇಶದಲ್ಲಿ 8 ಲಕ್ಷದ 50 ಸಾವಿರ ನೋಂದಾಯಿತ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳಲ್ಲಿ 29 ಕೋಟಿಗೂ ಅಧಿಕ ಸದಸ್ಯರಿದ್ದು, ಕೃಷಿ ವಲಯದ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಿದ್ದಾರೆ. ದೇಶದಲ್ಲಿಂದು ಸಾವಯವ ಉತ್ಪನ್ನ ಹೆಚ್ಚಿಸಲು ಅಪಾರ ಅವಕಾಶ ಸೃಷ್ಟಿಯಾಗಿದ್ದು, ನೂತನ ಸಂಘದ ಮೂಲಕ ಕಡಿಮೆ ದರದಲ್ಲಿ ಸಾವಯವ ಉತ್ಪನ್ನಗಳ ಪರೀಕ್ಷೆ, ದೃಢೀಕರಣ ಪತ್ರ ಪಡೆಯಲು ಸುಲಭಸಾಧ್ಯವಾಗಲಿದೆ. ರೈತರ ಆದಾಯ ವೃದ್ಧಿ ಹಾಗೂ ಸಹಕಾರ ಕ್ಷೇತ್ರದ ಬಲರ್ಧನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದರೊಂದಿಗೆ, ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲು ಸಹಾಯಧನ ಯೋಜನೆಗೆ ಅನುಮತಿ ನೀಡಲಾಗಿದ್ದು, 2600 ಕೋಟಿ ರೂಪಾಯಿ ಅನುದಾನ ನೀಡಲು ಉದ್ದೇಶಿಸಲಾಗಿದೆ. ಕಳೆದ 8 ವರ್ಷಗಳಿಂದ ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕಳೆದ ಡಿಸೆಂಬರ್ ನಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ 12 ಲಕ್ಷ ಕೋಟಿ ರೂಪಾಯಿ ಪಾವತಿಯಾಗಿದೆ. ಈ ಸಂಖ್ಯೆ ದೇಶದ ಡಿಜಿಪಿಗೆ ಹೋಲಿಸಿದರೆ ಶೇಕಡ 54ರಷ್ಟಿದೆ. ಸಹಾಯಧನ ಯೋಜನೆ ಮೂಲಕ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕಾ ವಲಯ, ಅಸಂಘಟಿತ ಕ್ಷೇತ್ರ, ರೈತರು ಮತ್ತು ಕಾರ್ಮಿಕ ವರ್ಗಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ಕೋಲ್ಕತದಲ್ಲಿರುವ ರಾಷ್ಟ್ರೀಯ ಜಲ ಮತ್ತು ಸ್ವಚ್ಛತಾ ಗುಣಮಟ್ಟ ಸಂಸ್ಥೆಗೆ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಹೆಸರನ್ನಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
_ನಮ್ಮನ್ನು ಡೇಲಿಹಂಟ್ ನಲ್ಲಿ ಫಾಲೋ-ಸಪೋರ್ಟ್ ಮಾಡಲು ಕ್ಲಿಕ್ಕಿಸಿ