ಬೆಂಗಳೂರು: ನಾಡಿನಾದ್ಯಂತ ಇಂದು ಸಂತಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ. ನಾಡಿನ ಪ್ರಸಿದ್ಧ ಕೀರ್ತನೆಕಾರರಲ್ಲಿ ಒಬ್ಬರಾದ ಕನಕದಾಸರು, ಕವಿ, ತತ್ವಜ್ಞಾನಿ, ಸಂಗೀತ, ಕೀರ್ತನೆ ಹಾಗೂ ಉಗಾ ಭೋಗ ಸೇರಿದಂತೆ ಹಲವು ಪ್ರಕಾರದ ಸಾಹಿತ್ಯ ರಚಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಕನಕದಾಸರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರ ಭವನದ ಬಳಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ನಂತರ ಮುಖ್ಯಮಂತ್ರಿ, ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಂತಹ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ಮಾನವೀಯ ಹಾಗೂ ಸಮಾನತೆ ಗುಣವನ್ನು ಸಾರಿದವರು, ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ಅವರ ಆದರ್ಶಗಳನ್ನು ಸಮಾಜದಲ್ಲಿ ಶಾಂತಿ ಮತ್ತು ಪ್ರಗತಿ ಸಾಧಿಸಲು ಸಾಧ್ಯ ಎಂದರು.
