ಕೊಚ್ಚಿ – ಕೇರಳ: ಅತ್ಯಾಧುನಿಕ ಯುದ್ಧ ತಂತ್ರಜ್ಞಾನ ಒಳಗೊಂಡಿರುವ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಅಧಿಕೃತವಾಗಿ ನೌಕಾದಳ ಸೇರಿದೆ. ಪ್ರಧಾನಿ ನರೇಂದ್ರ ಮೋದಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಪ್ರಧಾನಿ ನೌಕಾಪಡೆಯ ಹೊಸ ಧ್ವಜವನ್ನು ಸಹ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ನೌಕಾಪಡೆ ಪಥಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಿತು.
ಬಳಿಕ ಪ್ರಧಾನಿ, ವಿಕ್ರಾಂತ್ ಶಕ್ತಿಶಾಲಿ ಭಾರತದ ಪ್ರಮುಖ ಸಂಕೇತ. ವಿಕ್ರಾಂತ್ ಕುರಿತು ವಿರಾಟ್, ವಿಶೇಷ್ ಹಾಗೂ ವಿಶ್ವಾಸ ಎಂದು ಬಣ್ಣಿಸಿದ ಅವರು, ಭಾರತೀಯ ನೌಕಾಪಡೆಯ ಭೀಮ ಎಂದರು. ಸ್ವದೇಶಿ ನಿರ್ಮಾಣದೊಂದಿಗೆ ದೇಶದ ಸ್ವಾಭಿಮಾನ ಹೆಚ್ಚಿಸಿದ ಆಧುನಿಕ ತಂತ್ರಜ್ಞಾನಯುಕ್ತ ವಿಕ್ರಾಂತ್ ರೂಪಿಸಿದ ತಂತ್ರಜ್ಞರ ತಂಡಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ರಕ್ಷಣಾ ಶಕ್ತಿಯ ಬಗ್ಗೆ ಯಾರೊಬ್ಬರೂ ನಿರ್ಲಕ್ಷ್ಯ ಮಾಡುವಂತಿಲ್ಲ. ನಮ್ಮ ಮೂರು ಸೇನಾಬಲ ಅತ್ಯಂತ ಸಮರ್ಥವಾಗಿದೆ. ಆತ್ಮ ನಿರ್ಭರ್ ಯೋಜನೆಯಡಿ ಶೇಕಡ 76ರಷ್ಟು ಸ್ವದೇಶಿ ತಂತ್ರಜ್ಞಾನ ಬಳಸಿ ತಯಾರಿಸಿರುವ ಐಎನ್ಎಸ್ ವಿಕ್ರಾಂತ್ ವಿಶ್ವಮಟ್ಟದಲ್ಲಿ ಭಾರತದ ಸೇನಾ ಶಕ್ತಿಯನ್ನು ಉತ್ತುಂಗಕ್ಕೆ ಏರಿಸಿದೆ ಎಂದು ತಿಳಿಸಿದರು.

ರಾಜನಾಥ್ ಸಿಂಗ್, ಆಧುನಿಕ ಯುದ್ಧ ತಂತ್ರಜ್ಞಾನ ಒಳಗೊಂಡಿರುವ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆಯು ರಾಷ್ಟ್ರದ ಗೌರವ ಹಾಗೂ ಶಕ್ತಿಯ ಸಂಕೇತವಾಗಿದ್ದು, ಇದು ಭಾರತೀಯ ಸೇನೆಯನ್ನು ಪ್ರೋತ್ಸಾಹಿಸುವ ಜೊತೆಗೆ ಸೇನೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ, ಪ್ರಲ್ಹಾದ್ ಜೋಶಿ, ಸರ್ಬಾನಂದ ಸೋನೆವಾಲ, ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಮುಖ್ಯಮಂತ್ರಿ ಪಿಣಾರಾಯಿ ವಿಜಯನ್, ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ . ಹರಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
_ CLICK to Follow us on DailyHunt