ತುಮಕೂರು: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮ ದಿನಾಚರಣೆ ಹಾಗೂ ಗುರುವಂದನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಶ್ರೀಮಠಕ್ಕೆ ಭೇಟಿ ನೀಡಿದ ಅವರು, ಸ್ವಾಮೀಜಿ ಅವರ ಗದ್ದುಗೆಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಮಿತ್ ಶಾ, ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ಧಗಂಗೆ ಪುಣ್ಯಕ್ಷೇತ್ರಗಳಾಗಿವೆ. ಗಂಗೆಯಲ್ಲಿ ಮುಳುಗಿದರೆ, ಪಾಪ ಪರಿಹಾರವಾಗುತ್ತದೆ. ಸಿದ್ಧಗಂಗೆಗೆ ಭೇಟಿ ನೀಡಿದರೆ , ಜನ್ಮ ಜನ್ಮಾಂತರದ ಪುಣ್ಯ ಜಾಗೃತವಾಗುತ್ತದೆ ಎಂದರು. ಡಾ. ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ನೂರಾರು ವರ್ಷಕ್ಕೆ ದಾರಿದೀಪವಾಗಲಿದೆ. ಶ್ರೀಗಳು ಅನುಸರಿಸಿದ ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹ ಮಾದರಿಯನ್ನು , ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಳವಡಿಸಿಕೊಂಡಿದ್ದಾರೆ. ದೇಶದಲ್ಲಿ 80 ಕೋಟಿ ಜನರಿಗೆ, ಆಹಾರ ಭದ್ರತೆ, 3 ಕೋಟಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗಿದೆ. ನೂತನ ಶಿಕ್ಷಣ ನೀತಿಯ ಮೂಲಕ, ಮಾತೃಭಾಷೆಯಲ್ಲೇ ಕಲಿಯುವ ಅವಕಾಶ ಕಲ್ಪಿಸಲಾಗಿದೆ ಎಂದರು. ಶ್ರೀಮಠದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಎಲ್ಲಾ ಜಾತಿ, ಧರ್ಮದ ಬಡ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವಕುಮಾರ ಸ್ವಾಮೀಜಿಯವರು 88 ವರ್ಷಗಳ ಕಾಲ ನಾಡಿನ ಸೇವೆ ಮಾಡಿ, ಜನರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಅವರು ಅಂದು ಹಚ್ಚಿದ ಒಲೆ ಇಂದಿಗೂ ಉರಿಯುತ್ತಿದೆ. ನಿತ್ಯ ಸಾವಿರಾರು ಮಕ್ಕಳ ಹಸಿವು ನೀಗುತ್ತಿದೆ. ಸ್ವಾಮೀಜಿಯವರ ಅನ್ನ, ಅಕ್ಷರ, ಆಶ್ರಯ , ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಕನಸನ್ನು ಈಡೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ , ಮಧ್ಯಾಹ್ನದ ಶಾಲಾ ಬಿಸಿಯೂಟಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅನ್ನದಾಸೋಹ ಎಂದು ನಾಮಕರಣ ಮಾಡುವುದಾಗಿ ಘೋಷಣೆ ಮಾಡಿದರು.

ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಭಗವಂತ್ ಖೂಬಾ, ಎ. ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಜೆ.ಸಿ. ಮಾಧುಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ ಸೇರಿದಂತೆ ಅನೇಕ ಸಚಿವರು, ಸಂಸದರು, ಶಾಸಕರು, ಮಠಾಧೀಶರು ಉಪಸ್ಥಿತರಿದ್ದರು.