ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಮಂಕಿಪಾಕ್ಸ್ ಸೋಂಕಿನ ಪರಿಸ್ಥಿತಿ ಪರಾಮರ್ಶಿಸಲು ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು.
ಸಭೆಯ ಬಳಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ , ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಏರಿಕೆಯಾಗುತ್ತಿದ್ದು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮೂರನೇ ಡೋಸ್ ಲಸಿಕೆ ಪಡೆಯುವ ಮೂಲಕ ಸೋಂಕಿನ ವಿರುದ್ಧ ಹೆಚ್ಚಿನ ಸುರಕ್ಷತೆ ಪಡೆಯಬೇಕೆಂದು ಸಲಹೆ ನೀಡಿದರು. ವಿಶ್ವದಾದ್ಯಂತ ತಜ್ಞರು ನಡೆಸಿರುವ ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ 2ನೇ ಡೋಸ್ ಪಡೆದು 6-7 ತಿಂಗಳು ನಂತರ ರೋಗ ನಿರೋಧಕ ಶಕ್ತಿ ಕ್ರಮೇಣ ಕ್ಷೀಣಿಸಲಿದ್ದು, ಕೋವಿಡ್ ವಿರುದ್ಧ ದೀರ್ಘಕಾಲಿಕ ಸುರಕ್ಷತೆ ಪಡೆಯಲು 3ನೇ ಡೋಸ್ ಪಡೆಯುವುದು ಅತ್ಯಂತ ಅವಶ್ಯಕ. ಕೊರೊನಾ ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಈಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಜೊತೆಗೆ ನಾಳೆಯಿಂದ ಕೊರ್ಬೆವ್ಯಾಕ್ಸ್ ಲಸಿಕೆ ಕೂಡ ಲಭ್ಯವಿರಲಿದ್ದು, ಮೊದಲ, ಎರಡು ಡೋಸ್ ಸಂದರ್ಭದಲ್ಲಿ ಯಾವುದೇ ಲಸಿಕೆ ಪಡೆದುಕೊಂಡಿದ್ದರೂ ಕೊರ್ಬೆವ್ಯಾಕ್ಸ್ ಲಸಿಕೆಯನ್ನು 3ನೇ ಡೋಸ್ ಆಗಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಈವರೆಗೂ ಯಾವುದೇ ಮಂಕಿ ಪಾಕ್ಸ್ ಪ್ರಕರಣ ದೃಢಪಟ್ಟಿಲ್ಲದಿದ್ದರೂ ನಮ್ಮ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೇರಳದ ಗಡಿ ಜೆಲ್ಲೆಗಳಲ್ಲಿ ಹೆಚ್ಚಿನ ಕಣ್ಗಾವಲು, ಪ್ರಯಾಣಿಕರ ತಪಾಸಣೆ, ಸಂಪರ್ಕ ಪತ್ತೆ, ಔಷಧಗಳ ಶೇಖರಣೆ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ರಾಜ್ಯಾದ್ಯಂತ ಈ ವರ್ಷ ಮಳೆ ಹೆಚ್ಚಾಗಿರುವ ಕಾರಣ ಮಲೇರಿಯಾ, ಡೆಂಘೀ, ಚಿಕೂನ್ಗುನ್ಯಾ ಮತ್ತು ಎಚ್1 ಎನ್ 1 ಪ್ರಕರಣಗಳಲ್ಲೂ ಏರಿಕೆ ಕಂಡು ಬಂದಿದ್ದು ಇವುಗಳ ಅಂಕಿಸಂಖ್ಯೆ ಮತ್ತು ಈ ಸೋಂಕುಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದರು.
–Follow us on DailyHunt, for more news updates.