ಕುದುರೆಮುಖ: ಸುತ್ತಮುತ್ತಲ ಕಾಡು -ಮೇಡು ರಕ್ಷಣೆ ಅರಣ್ಯ ರಕ್ಷಕರಿಗೆ ದೊಡ್ಡ ಸವಾಲಾಗಿದ್ದು, ಇದನ್ನು ಎದುರಿಸಲು ಪ್ರತಿನಿತ್ಯ ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ -NITK ಅರಣ್ಯ ಸಂರಕ್ಷಕರಿಗೆ ಸಹಾಯಹಸ್ತ ಚಾಚಲು ಮುಂದಾಗಿದ್ದು, ನೂತನ ತಂತ್ರಜ್ಞಾನ ಆಧರಿತ ಸೋಲಾರ್ ಇ-ಬೈಕ್ ಅನ್ನು ಅನ್ವೇಷಣೆ ಮಾಡಿದೆ.
ಕುದುರೆಮುಖ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು, ಪರ್ವತ ಶ್ರೇಣಿ, ಶಿಖರ, ಕಾಡು ಮೇಡು, ಜಲಪಾತ. ಹೀಗೆ ಪ್ರಕೃತಿಯ ವೈವಿಧ್ಯಮಯತೆಯೇ ಮೈದಾಳಿರುವಂತಹ ಸುಂದರವಾದ ದೃಶ್ಯಾವಳಿ ನಮ್ಮ ಕಣ್ಣ ಮುಂದೆ ಬರುತ್ತದೆ. ಈ ಪರಸರವನ್ನು ಸಂರಕ್ಷಿಸುವ ಕಾರ್ಯದಲ್ಲಿ ನಿರತರಾಗಿರುವ ಅರಣ್ಯ ಸಂರಕ್ಷಕರಿಗೆ ತಮ್ಮ ಕಾರ್ಯಾಚರಣೆಯನ್ನು ಸುಲಭಗೊಳಿಸಲು ನೂತನ ಆವಿಷ್ಕಾರವನ್ನು ಕೈಗೊಳ್ಳಲಾಗಿದೆ. ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ -NITK ಅರಣ್ಯ ಸಂರಕ್ಷಕರಿಗೆ ಸಹಾಯಹಸ್ತ ನೀಡಲು ಮುಂದಾಗಿದ್ದು, ಕುದುರೆಮುಖ ಜೀವವೈವಿಧ್ಯ ರಕ್ಷಣಾ ವಿಭಾಗದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅರಣ್ಯ ರಕ್ಷಕರು ಕಾಡು-ಮೇಡಲ್ಲಿ , ಹಳ್ಳ-ಕೊಳ್ಳಗಳಲ್ಲಿ ಓಡಾಡಲು ಸಹಕಾರಿಯಾಗುವ ರೀತಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೋಲಾರ್ ಇ-ಬೈಕ್ ಅನ್ನು ಅಭಿವೃದ್ಧಿಪಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಈ ವಾಹನ ತಯಾರಿಸಲಾಗಿದೆ. ಈ ವಿದ್ಯುಗ್ 4.0 ತಂತ್ರಜ್ಞಾನದ ಇ-ಬೈಕ್ ಬ್ಯಾಟರಿ ಹಾಗೂ ಸೋಲಾರ್ ನಿಂದ ಚಾಲನೆಗೆ ಅವಕಾಶ ಮಾಡಿಕೊಡಲಾಗಿದೆ. ಶೂನ್ಯ ಮಾಲಿನ್ಯ ಹೊಂದಿರುವ ಇ-ಬೈಕ್, ಅರಣ್ಯ ಪ್ರದೇಶದಲ್ಲಿ ಸಂಚರಿಸಲು ಉತ್ತಮವಾಗಿದ್ದು, ರಕ್ಷಕರು ತಿಂಡಿ-ತಿನಿಸು ಸೇರಿದಂತೆ ಅಗತ್ಯ ವಸ್ತುಗಳನ್ನು ಸಹ ಕೊಂಡೊಯ್ಯಲು ಇದರಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ ವಿದ್ಯಾರ್ಥಿಗಳು ವಾಹನವನ್ನು ಆವಿಷ್ಕಾರ ಮಾಡಿದ್ದು, ಇದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ, ಇನ್ನೂ ಕೆಲ ಬೈಕ್ ಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ.
ಇ-ಮೊಬಿಲಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಯು.ಪೃಥ್ವಿರಾಜ್, ಅರಣ್ಯ ಇಲಾಖೆ ಸಿಬ್ಬಂದಿ ವಾಹನವನ್ನು ಬಳಸುತ್ತಿದ್ದು, ಮತ್ತೆರಡು ವಾಹನ ತಯಾರಿಕೆಗೆ ಅನುಮತಿ ನೀಡಿದ್ದಾರೆ, ಇ-ಬೈಕ್ ಆವಿಷ್ಕಾರ ತಂಡದ ವಿದ್ಯಾರ್ಥಿ ಸ್ಟೀವನ್, ಲಾಕ್ ಡೌನ್ ಗೂ ಮೊದಲು ಅಧ್ಯಯನ ಮಾಡಿ, ವಾಹನ ತಯಾರು ಮಾಡಲಾಗಿತ್ತು. ಇದೇ ಹೊತ್ತಿಗೆ ಲಾಕ್ ಡೌನ್ ಆದ ಕಾರಣ, ಬೈಕ್ ಬಿಡುಗಡೆಗೆ ಕೊಂಚ ತಡವಾಯಿತು. ಈ ಕಾರಣದಿಂದ ವಾಹನದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
