ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿಂದು ಕಲ್ಯಾಣ ಕರ್ನಾಟಕ ಯಾತ್ರಾಪರ್ವ ಕಾರ್ಯಕ್ರಮ ಹಾಗೂ ಬಸವಕಲ್ಯಾಣ ಸಾಂಸ್ಕೃತಿಕ ನಗರ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.

ಇದೇ ವೇಳೆ ಪುಸ್ತಕಗಳ ಅನಾವರಣ ನಡೆಯಿತು. ಬಳಿಕ ಮುಖ್ಯಮಂತ್ರಿ, ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ 12ನೇ ಶತಮಾನದ ಶರಣ ಚಳವಳಿ ಮಹತ್ವದ ಪಾತ್ರ ವಹಿಸಿದೆ. ಸಾಮಾಜಿಕ ಪರಿವರ್ತನೆಗೆ ಮಾರ್ಗ ತೋರಿದ ಬಸವಾದಿ ಶರಣರು ಬದುಕಿನ ಸಾರ್ಥಕತೆಗೆ ಬೇಕಾದ ಆದರ್ಶಗಳನ್ನು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾಯಕದ ಮಹತ್ವ ಸಾರಿದ ಅವರು, ವೈಚಾರಿಕ ಮನೋಭಾವವನ್ನು ಜನತೆಯಲ್ಲಿ ಪ್ರಚೋದಿಸಿದರು ಎಂದು ತಿಳಿಸಿದರು. ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಕಳೆದ 2 ವರ್ಷದ ಹಿಂದೆಯೇ 500 ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡಿದೆ. ದೇಶದ ಮೊದಲ ಸಂಸತ್ತು ಎಂಬ ಖ್ಯಾತಿಯ ಅನುಭವ ಮಂಟಪದ ಮರು ನಿರ್ಮಾಣದಿಂದ ವೈಚಾರಿಕ ಗುಣಧರ್ಮ ಬೆಳೆಯಲಿದೆ. ಸಮಾಜದಲ್ಲಿ ಸಾಮರಸ್ಯ, ಶಾಂತಿ, ಸೌಹಾರ್ದತೆ ನೆಲೆಗೊಳ್ಳಲಿ ಎಂಬ ಆಶಯವನ್ನು ಹೊಂದಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಬಜೆಟ್ ನಲ್ಲಿ 3 ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ಕಳೆದ ಜನವರಿಯಲ್ಲಿ 1 ಸಾವಿರದ 400 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ಕೊನೆಯ ವಾರದೊಳಗೆ ಸಂಬಂಧಿತ ಕ್ರಿಯಾಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಎಲ್ಲ ಹುದ್ದೆಗಳ ಭರ್ತಿಗೆ ಆದ್ಯತಾವಾರು ಕ್ರಮ ವಹಿಸಲಾಗುವುದು. ಅಭಿವೃದ್ಧಿ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲು ಒತ್ತು ನೀಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಪ್ರಭು ಚೌಹಾಣ್, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಸಚಿವ ಬಸವರಾಜ ಪಾಟೀಲ್ ಸೇಡಂ, ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ, ಬಸವಲಿಂಗ ಪಟ್ಟದೇವರು, ಹಾರಕೂಡ ಚನ್ನಬಸವ ಸ್ವಾಮೀಜಿ, ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
