- ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆಯ ವಿಧೇಯಕವನ್ನು ಈಗ ಜರುಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲೇ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಪಿಯು ಉಪನ್ಯಾಸಕರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಪನ್ಯಾಸಕರ ಸಂಘ ತಿಳಿಸಿದೆ.
- ರಾಜ್ಯಕ್ಕೆ ಮೂರು ಮೆಗಾ ಜವಳಿ ಪಾರ್ಕ್‌ಗಳನ್ನು ಹಂತ ಹಂತವಾಗಿ ನೀಡುವುದಾಗಿ ಕೇಂದ್ರ ಭರವಸೆ ನೀಡಿದೆ. ರಾಜ್ಯದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮತ್ತು ಆಟೋಮೊಬೈಲ್ ಕ್ಲಸ್ಟರ್ ಆರಂಭಿಸುವ ಕುರಿತ ನಮ್ಮ ಪ್ರಸ್ತಾವನೆಗೆ ಕೇಂದ್ರದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
- ವಜಾಗೊಳಿಸಲಾಗಿರುವ ರಾಜ್ಯ ಸಾರಿಗೆ ನೌಕರರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿಂದು ಪ್ರತಿಭಟನೆ ನಡೆಸಲಿದ್ದಾರೆ. ಆದರೆ, ಬಸ್ ಸೇವೆ ಎಂದಿನಂತೆ ಇರಲಿದೆ.
- ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್‌ಗೆ ಆಧಾರ್ E-KYC ಅಪ್‌ಡೇಟ್ ಮಾಡಲು ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ 2022 ಮಾರ್ಚ್ 31 ರವರೆಗೆ ವಿಸ್ತರಿಸಿದೆ.
- ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಮುಖಂಡರು ಇಂದು ಸೈಕಲ್ ಜಾಥಾ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ, ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಜಾಥಾ ನಡೆಸಿ, ಪ್ರತಿಭಟಿಸಿದರು. ಡಿ.ಕೆ. ಶಿವಕುಮಾರ್ , ಬೆಲೆ ಏರಿಕೆ ಖಂಡಿಸಿ, ಕಳೆದ ವಾರ ಎತ್ತಿನ ಬಂಡಿ ಚಲೋ ನಡೆಸಲಾಯಿತು. ಇಂದು ಸೈಕಲ್ ಜಾಥಾ ಮೂಲಕ ವಿಧಾನಸೌಧ ಪ್ರವೇಶಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾಲ್ನಡಿಗೆ ಜಾಥಾ ಕೈಗೊಳ್ಳಬೇಕಾಗುತ್ತದೆ. ಶೇಕಡ 20ರಷ್ಟು ಬೆಲೆ ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ, ಅಗತ್ಯ ವಸ್ತುಗಳ ಬೆಲೆ ಕಡಿಮೆಗೊಳಿಸುವಂತೆ ಒತ್ತಾಯಿಸಿ , ನಾವಿಂದು ಜನರ ಧ್ವನಿಯಾಗಿ ಪ್ರತಿಭಟಿಸುತ್ತಿದ್ದೇವೆ. ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ತೆರಿಗೆ ಕಡಿತಗೊಳಿಸಬೇಕೆಂಬ ಮನವಿಗೂ ಕಿವಿಗೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
- ರಾಜ್ಯದಲ್ಲಿ 1 ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಧಿವೇಶನದ ನಂತರ ಮುಖ್ಯಮಂತ್ರಿ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ತಿಳಿಸಿದ್ದಾರೆ.
- ನಾಡಹಬ್ಬ ದಸರಾ ಉತ್ಸವದಲ್ಲಿ ಭಾಗವಹಿಸಲು ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯ ನೇತೃತ್ವದ ಗಜರಾಜ ಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮು ಆರಂಭವಾಗಲಿದೆ. ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಗಜಪಡೆಗೆ ಪೂಜೆ ಸಲ್ಲಿಸಿ ನಂತರ ತಾಲೀಮು ಶುರುವಾಗಲಿದೆ.
- ಸರ್ಬಿಯನ್ ಹಣಕಾಸು ಸಚಿವರಾದ ನಿಕೋಲಾ ಸೆಲಕೋವಿಕ್ , ದೆಹಲಿಯಲ್ಲಿ ನಿನ್ನೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿಯಾಗಿದ್ದಾರೆ.
- ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರಿನ ಗಾಂಧಿನಗರ, ಸುಭಾಷ್ ನಗರ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇಮಠ, ಸರ್ .ಎಂ.ವಿ. ಬಡಾವಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
- ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರ ಅಮೃತ ಗ್ರಾಮ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಿಗೂ ಅಭಿವೃದ್ಧಿ ಕಾರ್ಯಗಳಿಗಾಗಿ 25 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ತಿಳಿಸಿದ್ದಾರೆ.
- ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವ ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನಿನ್ನೆ ಬೆಂಗಳೂರು ಗ್ರಾಮಾಂತರ ತಾಲೂಕಿನ ದಾಬಸ್‌ಪೇಟೆಯಲ್ಲಿ ತಿಳಿಸಿದ್ದಾರೆ. ಶಿವಗಂಗೆ – ಗೊಟ್ಟಿಗೆರೆ ರಸ್ತೆ ಸೇರಿದಂತೆ ವಿವಿಧ ಆಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ನಡೆಸಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು. ಬಳಿಕ ಅವರು, ತುಮಕೂರು ಮತ್ತು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳು ಬೆಂಗಳೂರಿಗೆ ಹತ್ತಿರ ಇದ್ದು ಅಭಿವೃದ್ಧಿಗೆ ಪೂರಕವಾಗಿವೆ. ಕೈಗಾರಿಕಾ ಪ್ರದೇಶಕ್ಕೆ ಎತ್ತಿನ ಹೊಳೆ ಯೋಜನೆಯಿಂದ ನೀರಿನ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಮಾಧುಸ್ವಾಮಿ ಆವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
