ಇಂದು ಸಶಸ್ತ್ರಪಡೆಗಳ ಧ್ವಜ ದಿನ. ಪ್ರತಿ ವರ್ಷ ಡಿಸೆಂಬರ್ 7ರಂದು ದೇಶವನ್ನು ರಕ್ಷಿಸಲು ಹೋರಾಡುತ್ತಿರುವ ಹಾಗೂ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸಲಾಗುವುದು. ಮಾತೃಭೂಮಿಯ ರಕ್ಷಣೆಯ ಸೇವೆಯಲ್ಲಿ ತೊಡಗಿರುವ ಧೀರೋತ್ತಾದ ನಾಯಕರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂಬುದು ಈ ಧ್ವಜ ದಿನದ ಆಶಯವಾಗಿದೆ. ಈ ಕುರಿತು ತಮ್ಮ ವಿಡಿಯೋ ಸಂದೇಶದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಂದು ನಮ್ಮ ವೀರ ಸೈನಿಕರು ಹಾಗೂ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಧ್ವಜ ದಿನಾಚರಣೆ ಸೈನಿಕರ ತ್ಯಾಗ , ಬಲಿದಾನದ ಸಂಕೇತವಾಗಿದೆ . ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ ಸೈನಿಕರ ಕಲ್ಯಾಣಕ್ಕೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಈ ನಿಧಿಯಿಂದ ಸಂಗ್ರಹವಾಗುವ ಹಣವನ್ನು ಸೈನಿಕರು, ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬದವರ ಕಲ್ಯಾಣ ಹಾಗೂ ಪುನರ್ ವಸತಿಗೆ ಬಳಸಲಾಗುವುದು. ಈ ವರ್ಷ ರಕ್ಷಣಾ ಸಚಿವಾಲಯದಿಂದ ಇಡೀ ತಿಂಗಳ ಗೌರವ ಮಾಸವಾಗಿ ಆಚರಿಸಲಾಗುವುದು. ಸಾರ್ವಜನಿಕರು ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕು ಎಂದು ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ.

“ಕೋವಿಡ್-19 ಸೋಂಕು ನಿಯಂತ್ರಣ ನಿಯಮಗಳನ್ನು ಪಾಲಿಸೋಣ , ಇದು ಸ್ಕೈ ನ್ಯೂಸ್ RTWT ಕಳಕಳಿ “