ಇಂದು ಭಾರತೀಯ ನೌಕಾ ದಿನ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನೌಕಾಪಡೆಯ ಅನನ್ಯ ಸಾಧನೆಯನ್ನು ಸ್ಮರಿಸುವ ಸುದಿನ. ಆಪರೇಷನ್ ಟ್ರೈಡೆಂಟ್ ಹೆಸರಿನಲ್ಲಿ ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿ ಮೇಲೆ ದೇಶದ ನೌಕಾಸೇನೆ ಮಹತ್ವದ ದಾಳಿ ನಡೆಸಿತು. ಪಾಕಿಸ್ತಾನದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸಿ ಅಮೋಘ ಸಾಧನೆ ಮಾಡಿತ್ತು. ಇದರ ಅಂಗವಾಗಿ ದೇಶಾದ್ಯಂತ ನೌಕಾ ಪಡೆಯ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ದೇಶ ಇಂದು ಬಲಿಷ್ಠ ನೌಕಾಪಡೆಯನ್ನು ಹೊಂದಿದ್ದು, ಇದು ದೇಶದ ಹೆಮ್ಮೆಯಾಗಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್, ನೌಕಾ ಸಿಬ್ಬಂದಿಗೆ ಶುಭ ಕೋರಿದ್ದಾರೆ. ಭಾರತದ ನೌಕಾಪಡೆ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಡ್ಮಿರಲ್ ಹರಿಕುಮಾರ್ ಅವರು ನೌಕಾದಿನದ ಮುನ್ನಾ ದಿನವಾದ ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.
ಟ್ವೀಟ್ ಕಾರ್ನರ್ !
ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಟ್ವೀಟ್ ಸಂದೇಶದಲ್ಲಿ, ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ನೌಕಾ ದಿನದ ಅಂಗವಾಗಿ ಶುಭ ಕೋರಿದ್ದಾರೆ. ಸಾಗರ ವಲಯದ ಭದ್ರತೆ, ಸಮುದ್ರ ರಕ್ಷಣೆ, ಹಾಗೂ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ನೌಕಾಪಡೆ ಉತ್ತಮ ಸೇವೆ ಸಲ್ಲಿಸಿದೆ. ನಿಮ್ಮ ಅರ್ಪಣಾ ಮನೋಭಾವದ ಕಾರ್ಯಕ್ಕೆ ದೇಶ ಸದಾ ಋಣಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ದೇಶದ ಹಿತಾಸಕ್ತಿ ಕಾಪಾಡುವ ಸಮಗ್ರತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನೌಕಾಪಡೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ನಮ್ಮ ನೌಕಾಪಡೆಯ ವೃತ್ತಿಪರತೆ ಬಗ್ಗೆ ಹೆಚ್ಚಿನ ಗೌರವವಿದೆ. ಅಸಾಧಾರಣ ಶೌರ್ಯದಿಂದ ಕಾರ್ಯ ನಿರ್ವಹಿಸುತ್ತಿದ್ದು, ನೈಸರ್ಗಿಕ ವಿಪತ್ತು ಹಾಗೂ ಬಿಕ್ಕಟ್ಟು ಸಂದರ್ಭದಲ್ಲಿ ನೌಕಾ ಸಿಬ್ಬಂದಿ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, 1971ರಲ್ಲಿ ಇದೇ ದಿನ ಟ್ರೈಡೆಂಟ್ ಕಾರ್ಯಾಚರಣೆಯಲ್ಲಿ ನೌಕಾಪಡೆ ವಹಿಸಿದ ಪಾತ್ರ ಸದಾ ಸ್ಮರಣೀಯ ಎಂದು ಹೇಳಿದ್ದಾರೆ.
