ದೆಹಲಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಅಂತಾರಾಷ್ಟ್ರೀಯ ದಿವ್ಯಾಂಗ ಜನರ ದಿನದ ಅಂಗವಾಗಿ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೃಷ್ಟಿ ವಿಶೇಷ ಚೇತನರಿಗೆ ಶಿಕ್ಷಣವನ್ನು ಸುಗಮಗೊಳಿಸಲು ಸಂಸ್ಥೆ ಸ್ಥಾಪಿಸಿರುವ ಬೆಂಗಳೂರಿನ ವೈ.ವಿದ್ಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಿವ್ಯಾಂಗರು , ದಿವ್ಯಾಂಗರ ಸಶಕ್ತೀಕರಣಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ನಂತರ ಅವರು, ದಿವ್ಯಾಂಗ ದಿನದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ ಸಕಾರಾತ್ಮಕ ಪರಿವರ್ತನೆ ತರುವುದರ ಜೊತೆಗೆ ಉತ್ಕೃಷ್ಟ ಕೊಡುಗೆ ಮಾನ್ಯತೆ ನೀಡುವ ಪ್ರಯತ್ನವಾಗಿದೆ. ಸಾಧಕರು ಮತ್ತು ಸಂಸ್ಥೆಗಳಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದರು. ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ ವಿಶ್ವಾದ್ಯಂತ ನೂರು ಕೋಟಿಗೂ ಹೆಚ್ಚು ದಿವ್ಯಾಂಗರಿದ್ದಾರೆ. ಪ್ರತಿ 8ನೇ ವ್ಯಕ್ತಿಯಲ್ಲಿ ಯಾವುದಾದರೊಂದು ರೂಪದಲ್ಲಿ ದಿವ್ಯಾಂಗತೆ ಇರುತ್ತದೆ. ಭಾರತದಲ್ಲಿಯೂ ಕೂಡ ಎರಡೂವರೆ ಕೋಟಿಗೂ ಹೆಚ್ಚು ದಿವ್ಯಾಂಗರಿದ್ದಾರೆ. ಹೀಗಾಗಿ ದಿವ್ಯಾಂಗರು ಸ್ವತಂತ್ರವಾಗಿ ಗೌರವಪೂರ್ಣ ಜೀವನ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ಸಮಾಜದ ಕರ್ತವ್ಯ ಹಾಗೂ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು. ಪ್ರತಿಯೊಬ್ಬ ದಿವ್ಯಾಂಗರಿಗೆ ಉತ್ತಮ ಶಿಕ್ಷಣ ಲಭಿಸಬೇಕು. ಮನೆಯಲ್ಲಿ ಹಾಗೂ ಸಮಾಜದಲ್ಲಿ ಸುರಕ್ಷತೆ ಇರಬೇಕು. ತನ್ನ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆ ಇರಬೇಕು. ಸಮಾನ ಉದ್ಯೋಗಾವಕಾಶ ಲಭಿಸಬೇಕು. ಇದೆಲ್ಲವನ್ನೂ ಖಾತ್ರಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಜ್ಞಾನಾರ್ಜನೆ ಮತ್ತು ಉತ್ಕೃಷ್ಟತೆ ಪಡೆಯಲು ಎಂದಿಗೂ ಅಂಗವೈಕಲ್ಯತೆ ಅಡ್ಡಿಯಾಗಿಲ್ಲ. ಋಷಿ ಅಷ್ಟಾವಕ್ರನ ಕಥೆಯೇ ಇದಕ್ಕೆ ಸಾಕ್ಷಿ ಎಂದರು. ಭಕ್ತಿ ಸಾಹಿತ್ಯದಲ್ಲಿ ಸೂರ್ ದಾಸ್ ದೃಷ್ಟಿವಿಶೇಷಚೇತನರಾಗಿದ್ದರೂ ಶ್ರೀಕೃಷ್ಣನ ವರ್ಣನೆಯನ್ನು ಅದ್ಭುತವಾಗಿ ಮಾಡಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ವೀರೇಂದ್ರ ಕುಮಾರ್, ಅಂತಾರಾಷ್ಟ್ರೀಯ ದಿವ್ಯಾಂಗ ಜನರ ದಿನ ವಿಶೇಷ ಚೇತನರನ್ನು ಸಶಕ್ತಗೊಳಿಸಲು ಜವಾಬ್ದಾರಿಯನ್ನು ಉತ್ತೇಜಿಸುವ ದಿನವಾಗಿದ್ದು, ದಿವ್ಯಾಂಗರ ಸಬಲೀಕರಣಕ್ಕೆ ಶ್ರಮಿಸುತ್ತಿರುವವರಿಗೆ ಮತ್ತು ಸಾಧನೆ ಮೆರೆದ ದಿವ್ಯಾಂಗರನ್ನು ಗುರುತಿಸಿ, ಪುರಸ್ಕರಿಸಿರುವ ದಿನವೂ ಆಗಿದೆ ಎಂದರು. ಕೇಂದ್ರ ಸರ್ಕಾರ ದಿವ್ಯಾಂಗ ಜನರ ವಿಷಯದಲ್ಲಿ ಸಂವೇದನಾಶೀಲವಾಗಿದ್ದು, 2014ರಿಂದೀಚೆಗೆ ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಸಾಮೂಹಿಕ ಪ್ರಯತ್ನ ಎಂಬ ಮಂತ್ರದೊಂದಿಗೆ ಅವರ ಸಶಕ್ತೀಕರಣಕ್ಕೆ ಹಲವು ಉಪಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ವಿಶೇಷಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮತ್ತು ದೇಶವನ್ನು ಆತ್ಮ ನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು. ಬುದ್ಧಿಮಾಂದ್ಯರ ಪುನರ್ವಸತಿಗಾಗಿ ಮಧ್ಯಪ್ರದೇಶದ ಶಿವಾರ್ ನಲ್ಲಿ ರಾಷ್ಟ್ರೀಯ ಮಾನಸಿಕ ಸ್ವಾಸ್ಥ್ಯ ಪುನರ್ ವಸತಿ ಕೇಂದ್ರವನ್ನು ಸ್ಥಾಪಿಸುತ್ತಿದೆ. ದಿವ್ಯಾಂಗರ ಪ್ರತಿಭೆ ಮತ್ತು ಕೌಶಲ್ಯವನ್ನು ಹೊರತರಲು ತಮ್ಮ ಸಚಿವಾಲಯ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯಸಚಿವರುಗಳಾದ ರಾಮದಾಸ್ ಅಠಾವಳೆ, ಪ್ರತಿಮಾ ಭೂಮಿಕ್ ಮತ್ತಿತರರು ಉಪಸ್ಥಿತರಿದ್ದರು.
_CLICK to Follow-Support us on Googlenews