- > ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಇಪಿಎಸ್ 1995 ರ ಅಡಿಯಲ್ಲಿ ಪಿಂಚಣಿಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (ಸಿಪಿಪಿಎಸ್) ಅನುಮೋದಿಸಿದ್ದಾರೆ; ಇದರಿಂದ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
- > ಮುಂದಿನ ಹಂತದಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್) ಪರಿವರ್ತನೆಯಾಗುವುದು
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಮತ್ತು ಅಧ್ಯಕ್ಷರು, ಟ್ರಸ್ಟಿಗಳ ಕೇಂದ್ರೀಯ ಮಂಡಳಿ, ಎಪಿಎಫ್ ನೌಕರರ ಪಿಂಚಣಿ ಯೋಜನೆ, 1995ಕ್ಕಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಸಿಪಿಪಿಎಸ್ ಪ್ರಮುಖ ಬದಲಾವಣೆಯಾಗಿದ್ದು ಇದು ಭಾರತದಾದ್ಯಂತ ಯಾವುದೇ ಬ್ಯಾಂಕ್, ಯಾವುದೇ ಶಾಖೆಯ ಮೂಲಕ ಪಿಂಚಣಿ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.
ಈ ಮಹತ್ವದ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, “ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಅನುಮೋದನೆಯು ಇಪಿಎಫ್ಒ ನ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲು ಸೂಚಿಸುತ್ತದೆ. ಪಿಂಚಣಿದಾರರು ತಮ್ಮ ಪಿಂಚಣಿಗಳನ್ನು ಯಾವುದೇ ಬ್ಯಾಂಕ್ನಿಂದ, ಯಾವುದೇ ಶಾಖೆಯಿಂದ, ದೇಶದ ಯಾವ ಭಾಗದಿಂದಲಾದರೂ ಸ್ವೀಕರಿಸಲು ಅನುವು ಮಾಡಿಕೊಡುವ ಮೂಲಕ, ಈ ಉಪಕ್ರಮವು ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸುತ್ತದೆ ಮತ್ತು ತಡೆರಹಿತ ಮತ್ತು ಪರಿಣಾಮಕಾರಿ ವಿತರಣಾ ಕಾರ್ಯವಿಧಾನವನ್ನು ಖಚಿತಪಡಿಸುತ್ತದೆ. ಇಪಿಎಫ್ ಒ ಅನ್ನು ಹೆಚ್ಚು ದೃಢವಾದ, ಸ್ಪಂದಿಸುವ ಮತ್ತು ತಂತ್ರಜ್ಞಾನದಿಂದ ಶಕ್ತಗೊಂಡ ಸಂಸ್ಥೆಯಾಗಿ ಪರಿವರ್ತಿಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಹಾಗು ಅದರ ಸದಸ್ಯರು ಮತ್ತು ಪಿಂಚಣಿದಾರರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಬದ್ಧವಾಗಿದೆ.
ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯು ಇಪಿಎಫ್ಒದ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸುಧಾರಿತ ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ, ಇದು ಪಿಂಚಣಿದಾರರಿಗೆ ಹೆಚ್ಚು ಪರಿಣಾಮಕಾರಿ, ತಡೆರಹಿತ ಮತ್ತು ಬಳಕೆದಾರ ಸ್ನೇಹಿಯಾಗಿರುತ್ತದೆ.
ಪಿಂಚಣಿದಾರರು ಸ್ಥಳವನ್ನು ಮತ್ತೊಂದು ಕಡೆ ಬದಲಾಯಿಸಿದಾಗ ಅಥವಾ ಅವರ ಬ್ಯಾಂಕ್ ಅಥವಾ ಶಾಖೆಯನ್ನು ಬದಲಾಯಿಸಿದಾಗಲೂ ಸಹ ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲದೇ ಭಾರತದಾದ್ಯಂತ ಪಿಂಚಣಿ ವಿತರಣೆಯನ್ನು ಸಿಪಿಪಿಎಸ್ ಖಚಿತಪಡಿಸುತ್ತದೆ. ನಿವೃತ್ತಿಯ ನಂತರ ಸ್ವಗ್ರಾಮಕ್ಕೆ ತೆರಳುವ ಪಿಂಚಣಿದಾರರಿಗೆ ಇದು ಉತ್ತಮ ಪರಿಹಾರವಾಗಿದೆ.
1ನೇ ಜನವರಿ 2025 ರಿಂದ ಇಪಿಎಫ್ಒ ನ ಜರಗುತ್ತಿರುವ ಐಟಿ ಆಧುನೀಕರಣ ಯೋಜನೆಯ ಕೇಂದ್ರೀಕೃತ ಐಟಿ ಸಕ್ರಿಯಗೊಳಿಸಿದ ವ್ಯವಸ್ಥೆಯ(CITES 2.01) ಭಾಗವಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಮುಂದಿನ ಹಂತದಲ್ಲಿ, ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್) ಸುಗಮವಾದ ಪರಿವರ್ತನೆಯನ್ನು ಸಕ್ರಿಯಗೊಳಿಸುತ್ತದೆ.
ಸಿಪಿಪಿಎಸ್ ವ್ಯವಸ್ಥೆಯು ಅಸ್ತಿತ್ವದಲ್ಲಿರುವ ಇಪಿಎಫ್ಒದ ಪ್ರತಿಯೊಂದು ವಲಯ ಮತ್ತು ಪ್ರಾದೇಶಿಕ ಕಚೇರಿಯು ಕೇವಲ 3-4 ಬ್ಯಾಂಕ್ಗಳೊಂದಿಗೆ ಪ್ರತ್ಯೇಕ ಒಪ್ಪಂದಗಳಿಂದ ನಿರ್ವಹಿಸುತ್ತಿರುವ ವಿಕೇಂದ್ರೀಕೃತವಾಗಿರುವ ಪಿಂಚಣಿ ವಿತರಣಾ ವ್ಯವಸ್ಥೆಯಿಂದ ಒಂದು ಮಹತ್ತರ ಬದಲಾವಣೆಯಾಗಿದೆ. ಪಿಂಚಣಿ ಪ್ರಾರಂಭವಾಗುವ ಸಮಯದಲ್ಲಿ ಪಿಂಚಣಿದಾರರು ಯಾವುದೇ ಪರಿಶೀಲನೆಗಾಗಿ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ ಮತ್ತು ಬಿಡುಗಡೆಯಾದ ತಕ್ಷಣ ಪಿಂಚಣಿಯನ್ನು ಜಮಾ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಹೊಸ ವ್ಯವಸ್ಥೆಗೆ ಬದಲಾದ ನಂತರ ಪಿಂಚಣಿ ವಿತರಣೆಯಲ್ಲಿ ಗಮನಾರ್ಹ ವೆಚ್ಚದಲ್ಲಿ ಕಡಿತವನ್ನು ಇಪಿಎಫ್ ಒ ನಿರೀಕ್ಷಿಸುತ್ತಿದೆ.
Source:PIB