ಬೆಂಗಳೂರು: 77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ವಿವಿಧ ಪೊಲೀಸ್ ತಂಡಗಳಿಂದ ಗೌರವವಂದನೆ ಸ್ವೀಕರಿಸಿದರು.
ಬಳಿಕ ಮುಖ್ಯಮಂತ್ರಿ, ಸ್ವಾತಂತ್ರ್ಯ ಎಂಬುದು ಮನುಷ್ಯರ ಜೀವಕ್ಕಿಂತ ಮಿಗಿಲು ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರು. ಆದ್ದರಿಂದಲೇ ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನವನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು. ನಾಡಿನ ನೆಲ, ಜಲ ಹಾಗೂ ಅಸ್ಮಿತೆಯನ್ನು ಕಾಪಾಡಲು ತಮ್ಮ ಸರ್ಕಾರ ಕಟಿಬದ್ಧವಾಗಿದೆ. ಹಾಗೆಯೇ ಮಹಾನ್ ಮಾನವತಾ-ವಾದಿಗಳಾದ ಬುದ್ಧ, ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರು ಪ್ರತಿಪಾದಿಸಿದ ಮಾನವೀಯತೆಯ ತಳಹದಿಯ ಅಭಿವೃದ್ಧಿಯ ಮಾದರಿಯನ್ನು ಅಳವಡಿಸಿಕೊಂಡಿದ್ದೇವೆ. ಇದನ್ನು ‘ಕರ್ನಾಟಕ ಮಾದರಿ ಅಭಿವೃದ್ಧಿʼ ಎಂದು ಕರೆಯಲಾಗುತ್ತದೆ . ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದು, ಅದಕ್ಕಾಗಿಯೆ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಪಂಚ ಖಾತರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಮುಂಗಾರು ವಿಳಂಬವಾಗಿ ಪ್ರಾರಂಭವಾದ್ದರಿಂದ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬರದ ಛಾಯೆ ಇತ್ತು. ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿದ್ದರಿಂದ ಹಲವೆಡೆ ಪ್ರವಾಹ ಪರಿಸ್ಥಿತಿಯೂ ತಲೆದೋರಿತು. ಅತಿವೃಷ್ಟಿ, ಅನಾವೃಷ್ಟಿಗಳೆರಡನ್ನೂ ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಹಾಗೂ ಇದರಿಂದಾಗುವ ಹಾನಿಯನ್ನು ತಗ್ಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ತಮ್ಮ ಸರ್ಕಾರವು ಪ್ರಾದೇಶಿಕ ಅಸಮಾನತೆ ನಿವಾರಿಸಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ಪ್ರವಾಸೋದ್ಯಮ ಕೂಡ ಆರ್ಥಿಕತೆ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಜನೆಗೆ ಮಹತ್ತರ ಕೊಡುಗೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲು ಒತ್ತು ನೀಡಲಾಗುವುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಬಳಿಕ KSRP, ಶ್ವಾನದಳ, NCC ತಂಡ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ, ಗೃಹ ಇಲಾಖೆ, ವಿವಿಧ ಶಾಲಾ ತಂಡಗಳು ಪರೇಡ್ ನಡೆಸಿದವು. ಇದೇ ವೇಳೆ ವಿವಿಧ ಶಾಲಾ ತಂಡಗಳಿಂದ ದೇಶಪ್ರೇಮ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.
_with inputs of twitt