ಬೆಂಗಳೂರು: ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಇಂದು ಆರಂಭವಾಗಿದ್ದು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಭೆಯನ್ನು ಉದ್ಘಾಟಿಸಿದರು.
ಸಮಾರಂಭ ಉದ್ದೇಶಿಸಿ, ‘ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ‘ ಎನ್ನುವ ಪ್ರಸಕ್ತ ಜಿ-20 ಶೃಂಗದ ಘೋಷವಾಕ್ಯ ಭಾರತದ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಂಘಟಿತ ಪ್ರಯತ್ನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಒಮ್ಮತದೊಂದಿಗೆ ಸಾಗುವುದನ್ನು ಜಿ-20 ಹಿಂದಿನಿಂದಲೂ ಸಾಧಿಸುತ್ತ ಬಂದಿದೆ ಎಂದು ಹೇಳಿದರು. ಜಗತ್ತು ಪ್ರಸಕ್ತ ಎದುರಿಸುತ್ತಿರುವ ಆಹಾರ ಭದ್ರತೆ, ರಕ್ಷಣೆ, ಹವಾಮಾನ ಬದಲಾವಣೆ ಸೇರಿದಂತೆ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಜಿ-20 ವೇದಿಕೆ ಸಮರ್ಥವಾಗಿದೆ, ಜಗತ್ತಿಗೆ ಗುರುತರ ಕೊಡುಗೆ ನೀಡಬಲ್ಲ ವೇದಿಕೆಯಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಇಂದಿನ ಯುಗ, ಯುದ್ಧದ ಸಮಯವಲ್ಲ ಎಂದು ಹೇಳಿರುವುದು ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವನ್ನು ತೋರುತ್ತದೆ. ರಾಜತಾಂತ್ರಿಕತೆ, ಮಾತುಕತೆಗಳು ಮುಂದಿನ ಮಾರ್ಗವಾಗಿವೆ ಎಂದು ಹೇಳಿದರು. ಜಿ-20 ಶೃಂಗದ ಸದಸ್ಯ ರಾಷ್ಟ್ರಗಳ ಮೊದಲ ಪ್ರಮುಖ ಸಭೆ ಬೆಂಗಳೂರಿನಲ್ಲಿ ಇದೇ 24 ಮತ್ತು 25ರಂದು ನಡೆಯಲಿದ್ದು, ಇಂದು ಇದರ ಪೂರ್ವಭಾವಿಯಾಗಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಭೆ ನಡೆಯುತ್ತಿದೆ.
_CLICK to Follow-Support us on Googlenews