ದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ (UNSC) ಇಂದು ಜರುಗಿತು.
ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಸಭೆ ಉದ್ದೇಶಿಸಿ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಇಂದಿನ ತುರ್ತು ಅಗತ್ಯವಾಗಿದ್ದು, ಭಾರತ ಇದಕ್ಕೆ ಆದ್ಯತೆ ನೀಡುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು ಮತ್ತು ಇತರ ದೇಶಗಳು ಭಯೋತ್ಪಾದನೆ ನಿಗ್ರಹದ ಪ್ರಾಮುಖ್ಯತೆ ಅರಿತಿವೆ. ಹೀಗಿದ್ದರೂ, ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಭಯೋತ್ಪಾದನೆಯ ಬೆಳವಣಿಗೆ ಮತ್ತು ವಿಸ್ತಾರದ ಅಪಾಯ ಹೆಚ್ಚುತ್ತಿದೆ ಎಂದು ಹೇಳಿದರು.
ಕಳೆದ 2 ದಶಕಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಯೋತ್ಪಾದನೆ ನಿಗ್ರಹಕ್ಕೆ ವಿವಿಧ ರೀತಿಯ ನಿರ್ಬಂಧ ಹೇರುವ ಮೂಲಕ ಉತ್ತಮ ಕ್ರಮ ಕೈಗೊಂಡಿದೆ. ಇದರಿಂದ ಭಯೋತ್ಪಾದನೆಗೆ ಸಂಪನ್ಮೂಲ ಒದಗಿಸುವ ದೇಶಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲು ಸಹಕಾರಿಯಾಗಿದೆ. ಇಂದು, ನೂತನ ತಂತ್ರಜ್ಞಾನಗಳು ಸರ್ಕಾರಗಳಿಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳು ಭಯೋತ್ಪಾದನೆ ಮತ್ತು ಮೂಲಭೂತವಾದಿ ಗುಂಪುಗಳಿಗೆ ತಮ್ಮ ವಿಚಾರಗಳನ್ನು ಪ್ರಚುರಪಡಿಸುವ ಮಾಧ್ಯಮದಂತಾಗಿವೆ. ಇವುಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನಾ ಸಂಘಟನೆಗಳ ಸದಸ್ಯರು ಮತ್ತು ಸಮಾಜದಲ್ಲಿ ವಿವಿಧ ಸಿದ್ಧಾಂತಗಳನ್ನು ಅನುಸರಿಸುವವರು ತಂತ್ರಜ್ಞಾನದಲ್ಲಿ ನೈಪುಣ್ಯತೆಯ ಮೂಲಕ ತಮ್ಮ ಸಾಮರ್ಥ್ಯ ವೃದ್ಧಿಸಿಕೊಂಡಿದ್ದಾರೆ. ಸಮಾಜದ ಸ್ವಾತಂತ್ರ್ಯ, ಸಹನೆ ಹಾಗೂ ಪ್ರಗತಿಯ ಮೇಲೆ ದಾಳಿ ಮಾಡಲು ಅವರು ಹಣ ಹಾಗೂ ನೈತಿಕತೆಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾನವರಹಿತ ವೈಮಾನಿಕ ದಾಳಿ ಹೆಚ್ಚುತ್ತಿರುವುದು ಸಹ ಹೆಚ್ಚಿನ ಅಪಾಯ ಒಡ್ಡಿವೆ ಎಂದು ಆತಂಕ ವ್ಯಕ್ತಪಡಿಸಿದರು.
_ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋಮಾಡಲು ಕ್ಲಿಕ್ಕಿಸಿ