ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿಯಿರುವ ಅರಸು ಅವರ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಲಾರ್ಪಣೆ ಮಾಡಿದರು.
ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದ ಬಳಿ ಏರ್ಪಡಿಸಿದ್ದ ಅರಸು ಅವರ ಜೀವನ – ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, ವೀಕ್ಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ, ದೇವರಾಜ ಅರಸು ಅವರು ಕರ್ನಾಟಕ ಕಂಡ ಧೀಮಂತ ನಾಯಕ. ಅವರು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕೈಗೊಂಡ ಹಲವು ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತ ಎಂದರು. ತಮ್ಮ ನೇತೃತ್ವದ ಸರ್ಕಾರ ಎಲ್ಲರನ್ನೊಳಗೊಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಿದೆ. ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಪ್ರತಾಪ ಸಿಂಹ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
_Follow us on DailyHunt