ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಇಂದಿನಿಂದ 3 ದಿನಗಳ ಹರ್ ಘರ್ ತಿರಂಗಾ – ಮನೆ ಮನೆಯ ಮೇಲೆ ತ್ರಿವರ್ಣಧ್ವಜ ಅಭಿಯಾನ ಆರಂಭವಾಗಿದೆ. ದೇಶದ ಎಲ್ಲೆಡೆ ಸಾರ್ವಜನಿಕರು ತಮ್ಮ ಮನೆಗಳಲ್ಲಿ ತ್ರಿವರ್ಣಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.
ಈ ಅಭಿಯಾನವನ್ನು ಘೋಷಿಸಿದ ದಿನದಿಂದ ದೇಶದ ನಾಗರಿಕರಿಗೆ 20 ಕೋಟಿಗೂ ಅಧಿಕ ತ್ರಿವರ್ಣ ಧ್ವಜ ಲಭ್ಯವಾಗುವಂತೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆಗಸ್ಟ್ 13ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ಘೋಷಿಸಿದ್ದರು. ದೇಶದ ಜನತೆಯಲ್ಲಿ ದೇಶ ಪ್ರೇಮವನ್ನು ಹೆಚ್ಚಿಸುವುದು ಮತ್ತು ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಸಿಬ್ಬಂದಿ ಹರ್ ಘರ್ ತಿರಂಗಾ ಅಭಿಯಾನವನ್ನು ಗುರುತಿಸುವ ಉತ್ತರಾಖಂಡದ ಗಡಿಯಲ್ಲಿ 14 ಕೆ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದರು. ಲಡಾಖ್ ನಲ್ಲಿ ಯೋಧರು ಸಹ ಧ್ವಜಾರೋಹಣ ಮಾಡಿ, ಗೌರವ ಸಲ್ಲಿಸಿದರು.

ಈ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಿದರು.