ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋದಲ್ಲಿಂದು ಆ ದೇಶದ ಜವಳಿ ದಿಗ್ಗಜ ಯುನಿಕ್ಲೋ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತದಾಶಿ ಯಾನಿ ಅವರನ್ನು ಭೇಟಿ ಮಾಡಿದರು. ಜವಳಿ ಉದ್ಯಮಕ್ಕೆ ಸಂಬಂಧಿಸಿದ ಅವಕಾಶಗಳ ಕುರಿತು ಚರ್ಚೆ ನಡೆಸಿದರು. ಜಪಾನ್ ಮೂಲದ ದೂರಸಂಪರ್ಕ ವಲಯದ ಎನ್ ಇಸಿ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷ ನೊಬುಹಿರಾ ಎಂಡೊ ಅವರನ್ನೂ ಪ್ರಧಾನಿ ಭೇಟಿ ಮಾಡಿದರು. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಎನ್ ಇಸಿ ನೀಡಿರುವ ಕೊಡುಗೆಯನ್ನು ಪ್ರಧಾನಿ ಪ್ರಶಂಸಿಸಿದರು.

ಭಾರತದಲ್ಲಿ ಸೃಷ್ಟಿಯಾಗಿರುವ ನೂತನ ಹಾಗೂ ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಉದ್ಯಮ ಕ್ಷೇತ್ರಗಳಲ್ಲಿನ ಅವಕಾಶಗಳ ಕುರಿತು ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುಜುಕಿ ಮೋಟಾರ್ ಕಾರ್ಪೋರೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಒಸಾಮು ಸುಜುಕಿ ಅವರೊಂದಿಗೆ ಪ್ರಧಾನಿ ಮಾತುಕತೆ ನಡೆಸಿ, ವಿದ್ಯುಚ್ಚಾಲಿತ ವಾಹನ ನಿರ್ಮಾಣ ಹಾಗೂ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋಗೆ ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಹೋಟೆಲ್ ಗೆ ಆಗಮಿಸಿದಾಗ ಅಲ್ಲಿನ ಭಾರತೀಯ ಸಮುದಾಯದವರು ರಾಷ್ಟ್ರಧ್ವಜ ಹಿಡಿದು ಹರ್ಷೋದ್ಗಾರಗಳ ನಡುವೆ ಸ್ವಾಗತಿಸಿದರು. ತಮ್ಮ ಪಾಲಕರೊಂದಿಗೆ ಹಲವಾರು ಮಕ್ಕಳು ಸಹ ವಿವಿಧ ಭಾಷೆಗಳಲ್ಲಿ ನಿಮಗೆ ಸ್ವಾಗತ ಎಂಬ ಭಿತ್ತಿ ಫಲಕ ಹಿಡಿದು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೆಲ ಮಕ್ಕಳ ಜೊತೆ ಪ್ರಧಾನಿ ಮಾತನಾಡಿ, ಅವರು ತಂದಿರುವ ಚಿತ್ರಗಳಿಗೆ ತಮ್ಮ ಹಸ್ತಾಕ್ಷರ ಹಾಕಿ ಸಂತಸ ಹಂಚಿಕೊಂಡರು.