ಫ್ರಾನ್ಸ್ ನ 75ನೇ ಕಾನ್ ಚಲನಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ಜೂಲಿಯಾನೆ ಮೂರೆ ಚಾಲನೆ ನೀಡಿದರು. ಈ ತಿಂಗಳ 28ರ ವರೆಗೆ ನಡೆಯಲಿರುವ ಜಾಗತಿಕ ಚಿತ್ರೋದ್ಯಮಗಳ ಗಣ್ಯರ ಸಮ್ಮುಖದಲ್ಲಿ ಅವರು, ಚಿತ್ರೋತ್ಸವಕ್ಕೆ ಶುಭಾರಂಭ ಮಾಡಿದ್ದಾರೆ. ದೇಶ 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಚಿತ್ರಗಳಿಗೆ ಈ ಬಾರಿ ವಿಶೇಷ ಮನ್ನಣೆ ನೀಡಲಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು ಭಾರತೀಯ ವಿಭಾಗವನ್ನು ಉದ್ಘಾಟಿಸಿದರು.
ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನ ಮತ್ತು ಭಾರತೀಯ ಚಿತ್ರಗಳ ವಿಶೇಷತೆ ಮತ್ತು ನಿರ್ಮಾಣ ಕುರಿತಂತೆ ಕಲಾವಿದರು ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಈ ವೇಳೆ 53ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಮರಣಾರ್ಥ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಯ ಹೆಚ್ಚು ಚಿತ್ರಗಳು ಭಾರತದಲ್ಲಿ ನಿರ್ಮಾಣವಾಗುತ್ತವೆ. ಭಾರತೀಯ ಚಲನಚಿತ್ರಗಳು ಜಾಗತಿಕ ಮನ್ನಣೆ ಗಳಿಸುತ್ತಿವೆ. ಭಾರತದಲ್ಲಿ ಪ್ರತಿವರ್ಷ 2 ಸಾವಿರಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರುವುದು ದೊಡ್ಡ ವಿಷಯವಾಗಿದೆ. ಸಾಮಾಜಿಕ, ಪೌರಾಣಿಕ, ಹಾಸ್ಯ , ಸಾಹಸ ಸೇರಿದಂತೆ ಎಲ್ಲ ಬಗೆಯ ಚಿತ್ರಗಳು ನಿರ್ಮಾಣಗೊಳ್ಳುತ್ತವೆ. ಚಿತ್ರೋದ್ಯಮಕ್ಕೆ ಯುವಜನತೆ ಹೆಚ್ಚಾಗಿ ಪ್ರವೇಶಿಸುತ್ತಿದ್ದು, ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಚಿತ್ರೋದ್ಯಮದಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ ಚಿತ್ರೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ ಎಂದರು.
ಕಲಾವಿದರಾದ ಶೇಖರ್ ಕಪೂರ್, ಆರ್. ಮಾಧವನ್, ನವಾಜುದ್ದೀನ್ ಸಿದ್ದಿಕಿ, ತಮನ್ನಾ, ದೀಪಿಕಾ ಪಡುಕೊಣೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ, ಫ್ರಾನ್ಸ್ ನಲ್ಲಿನ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್, ಸೇರಿದಂತೆ ಚಿತ್ರೋದ್ಯಮದ ಗಣ್ಯರು ಉಪಸ್ಥಿತರಿದ್ದರು.