ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮೃತಪಟ್ಟವರಿಗೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೇನೆಯ ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಮನಾಥ್ ಕೋವಿಂದ್ ಟ್ವೀಟ್ ಸಂದೇಶದಲ್ಲಿ , ದುರಂತದ ಕುರಿತು ದಿಗ್ಭ್ರಮೆಯಾಗಿದ್ದು, ರಾವತ್ ಅವರ ನಿಧನದಿಂದ ರಾಷ್ಟ್ರ ತನ್ನ ಶೌರ್ಯವಂತ ಪುತ್ರನನ್ನು ಕಳೆದುಕೊಂಡಂತಾಗಿದೆ. ಅವರ 4 ದಶಕಗಳ ನಿಸ್ವಾರ್ಥ ಸೇವೆ ಸ್ಮರಣೀಯ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಿಳಿಸಿದ್ದಾರೆ.
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಘಟನೆ ಕುರಿತು ಅತೀವ ಆಘಾತ ವ್ಯಕ್ತಪಡಿಸಿದ್ದು, ರಾವತ್ ಅವರ ದೃಢ ನಾಯಕತ್ವ ಮತ್ತು ತಂತ್ರಗಾರಿಕೆಯ ದೃಷ್ಟಿಕೋನಗಳು ಭಾರತದ ಭದ್ರತಾ ಸಾಮರ್ಥ್ಯಗಳನ್ನು ಬಲಗೊಳಿಸುವುದು, ದೇಶದ ರಕ್ಷಣೆ ವಿಷಯದಲ್ಲಿ ಅವರ ಸ್ಥಿರವಾದ ಕೊಡುಗೆ ಸದಾ ಸ್ಮರಣೀಯ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ , ಜನರಲ್ ಬಿಪಿನ್ ರಾವತ್ ಅವರು ಅಪ್ರತಿಮ ಸೈನಿಕರಾಗಿದ್ದರು. ನಿಜವಾದ ದೇಶಭಕ್ತರಾಗಿದ್ದ ಅವರು, ಸಶಸ್ತ್ರ ಪಡೆಗಳ ಆಧುನಿಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರಗಳ ವಿಷಯದಲ್ಲಿ ಅವರ ದೂರದೃಷ್ಟಿ ಮತ್ತು ಒಳನೋಟಗಳು ವಿಶಿಷ್ಟವೆನಿಸಿವೆ. ಅವರ ನಿಧನವು ತಮಗೆ ತೀವ್ರ ದುಃಖ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾವತ್ ಅವರ ನಿಧನದಿಂದ ಸಶಸ್ತ್ರ ಪಡೆಗಳಿಗೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ, ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಶೌರ್ಯವಂತ ಸೈನಿಕರಲ್ಲಿ ಒಬ್ಬರಾಗಿದ್ದರು. ತಾಯ್ನಾಡಿನ ಸೇವೆಗೆ ಅವರು ಅರ್ಪಿಸಿಕೊಂಡಿದ್ದರು. ಅವರ ವಿಶಿಷ್ಟ ಕೊಡುಗೆ ಮತ್ತು ಬದ್ಧತೆಯನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ದೇಶದ ರಕ್ಷಣಾ ವಲಯಕ್ಕೆ ರಾವತ್ ಅವರ ಕೊಡುಗೆ ಸ್ಮರಣೀಯ. ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಲಿಕಾಪ್ಟರ್ ದುರಂತದ ಬಗ್ಗೆ ಆಘಾತವಾಗಿದ್ದು, ಇಡೀ ದೇಶವನ್ನೇ ದಿಗ್ಭ್ರಮೆಗೀಡು ಮಾಡಿದೆ ಎಂದು ಹೇಳಿದ್ದಾರೆ.

Check out my profile on Dailyhunt
https://profile.dailyhunt.in/admin?s=a&ss=pd&uu=0x37ced1886419f7c6