ದೆಹಲಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಇಂದು . 1956ರ ಡಿಸೆಂಬರ್ 6ರಂದು ಅವರು ನಿಧನರಾದರು. ದೇಶಕ್ಕೆ ಅತ್ಯುತ್ತಮ ಸಂವಿಧಾನ ರೂಪಿಸಿ, ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ , ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು. ಸಮಾಜದಲ್ಲಿ ದಲಿತರ ಮೇಲಿನ ಶೋಷಣೆ ವಿರುದ್ಧ ಬಾಲ್ಯದಿಂದಲೇ ಹೋರಾಟ ಆರಂಭಿಸಿ, ಬಳಿಕ ಆ ಶೋಷಣೆಗೆ ಅಂತ್ಯ ಹಾಡಲು ಸಂವಿಧಾನದಲ್ಲಿ ಅವಕಾಶ ನೀಡಿದವರು ಡಾ.ಬಿ.ಆರ್. ಅಂಬೇಡ್ಕರ್.

ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಇಂದು ದೆಹಲಿಯ ಸಂಸತ್ ಭವನದ ಆವರಣದಲ್ಲಿ ಡಾ.ಅಂಬೇಡ್ಕರ್ ಫೌಂಡೇಷನ್ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಕೊಳ್ಳಲಾಗಿತ್ತು. ಬೌದ್ಧ ಬಿಕ್ಕುಗಳು ಧಮ್ಮ ಪೂಜೆ, ಪ್ರಾರ್ಥನೆ ಮೂಲಕ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗಾಯಕರು ಗಾನ ನಮನ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೀದರ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅವರು, ಅಂಬೇಡ್ಕರ್ ಅವರು ಭಾರತಕ್ಕೆ ನೀಡಿದ ಸಂವಿಧಾನ , ಸರ್ವ ಶ್ರೇಷ್ಠವಾದದ್ದು. ಎಲ್ಲ ಕಾಲಗಳಿಗೂ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂವಿಧಾನವಾಗಿದೆ. ವಿಶ್ವದ ಎಲ್ಲಾ ಸಂವಿಧಾನಗಳಿಗೆ ಹೋಲಿಸಿದಾಗ, ಭಾರತದ ಸಂವಿಧಾನದಷ್ಟು ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಮತ್ತೊಂದಿಲ್ಲ ಎಂದರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
