ಗೋವಾ: 52ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿನ್ನೆ ಗೋವಾದಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು ಫೀಚರ್ ಮತ್ತು ನಾನ್‌ಫೀಚರ್ ಚಿತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ಪನೋರಮಾ ವಿಭಾಗದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ 28ರವರೆಗೆ ಚಲನಚಿತ್ರೋತ್ಸವಕ್ಕೆ ಸಚಿವರು ನಿನ್ನೆ ಚಾಲನೆ ನೀಡಿದ್ದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ , ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ಚಲನಚಿತ್ರೋತ್ಸವದ ನಿರ್ದೇಶಕರಾದ ಚೈತನ್ಯ ಪ್ರಸಾದ್ ಸೇರಿದಂತೆ ಚಿತ್ರೋದ್ಯಮದ ಗಣ್ಯರು ಉಪಸ್ಥಿತರಿದ್ದರು. ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಮಾರ್ಟಿನ್ ಸ್ಕಾರ್ ಸೆಝಿ ಮತ್ತು ಇಸ್ಟ್ ವೆನ್ – ಝಾ ಬೊ ಅವರಿಗೆ ವರ್ಚುವಲ್ ಮೂಲಕ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಿತ್ರರಂಗದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಖ್ಯಾತ ಹಿರಿಯ ನಟಿ ಹೇಮಾಮಾಲಿನಿ, ಚಿತ್ರ ಸಾಹಿತಿ ಹಾಗೂ ಲೇಖಕ ಪ್ರಸೂನ್ ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಮಧ್ಯೆ, ದೇಶದ ವಿವಿಧ ಭಾಗಗಳಲ್ಲಿನ 75 ಯುವಕರನ್ನು ಆಯ್ಕೆ ಮಾಡಲಾಗಿದ್ದು, ಇವರುಗಳು ಭಾರತದ ಮುನ್ನೋಟದ ಕುರಿತು ವಿವಿಧ ಚಿತ್ರಗಳನ್ನು ಭಿತ್ತರಿಸಲಿದ್ದಾರೆ.ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್, ದಿಲೀಪ್ ಕುಮಾರ್ ಹಾಗೂ ನಿರ್ಮಾಪಕ ಬುದ್ಧದೇವ್ ದಾಸ್ ಗುಪ್ತಾ ಅವರನ್ನು ಸ್ಮರಿಸಲಾಯಿತು. ನಟರಾದ ರಿತೇಶ್ ದೇಶ್ ಮುಖ್, ಜೆನಿಲಿಯಾ ದೇಶ್ ಮುಖ್, ಶ್ರದ್ಧಾ ಕಪೂರ್, ಸಲ್ಮಾನ್ ಖಾನ್ ಮತ್ತು ರಣವೀರ್ ಸಿಂಗ್ ಪಾಲ್ಗೊಂಡಿದ್ದರು.

ಬಳಿಕ ಅನುರಾಗ್ ಸಿಂಗ್ ಠಾಕೂರ್, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಓ ಟಿ ಟಿ ವೇದಿಕೆ ಸ್ಥಾಪಿಸಲಾಗಿದ್ದು, ಇದರಲ್ಲಿ ಯಾವುದೇ ಚಿತ್ರ ತಯಾರಕರು ತಮ್ಮ ಚಿತ್ರಗಳನ್ನು ಪ್ರದರ್ಶಿಸಬಹುದಾಗಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ 75 ದೇಶಗಳ 148 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಭಾರತದ ಇತಿಹಾಸವನ್ನು ತಿಳಿಯಲು ವಿಶ್ವ ಬಯಸಿದೆ. ಈ ನಿಟ್ಟಿನಲ್ಲಿ ದೇಶದ ಇತಿಹಾಸ ಸಾರುವ ಚಿತ್ರಗಳು ನಿರ್ಮಾಣ ವಾಗಬೇಕಾಗಿದೆ ಎಂದರು.
