ನವ ದೆಹಲಿ : ಉಪ-ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ೬೭ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ದಾದಾ ಸಾಬೇಬ್ ಫಾಲ್ಕೆ ಪ್ರಶಸ್ತಿಗಳನ್ನು ದೆಹಲಿಯಲ್ಲಿಂದು ಪ್ರದಾನ ಮಾಡಿದರು. ಪ್ರಿಯದರ್ಶನ್ ನಿರ್ದೇಶನದ ಮಲಯಾಳಂ ಚಿತ್ರ, ‘ಮರಕ್ಕರ್ ಅರಬ್ಬಿ ಕಡಲಿಂತೆ ಸಿಂಹಂ’ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ‘ಅಕ್ಷಿ’ ಚಿತ್ರಕ್ಕೆ ರಜತ ಕಮಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ಮಾಪಕ ವಿ. ಶ್ರೀನಿವಾಸ್ ಮತ್ತು ನಿರ್ದೇಶಕ ಮನೋಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಿಂದಿ ಚಿತ್ರ ‘ಭೋನ್ಸ್ಲೆ’ ಯಲ್ಲಿನ ನಟನೆಗಾಗಿ ಮನೋಜ್ ಬಾಜ್ ಪೈ ಹಾಗೂ ತಮಿಳಿನ ‘ಅಸುರನ್’ ಚಿತ್ರದ ನಟನೆಗಾಗಿ ಧನುಷ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಮಣಿಕರ್ಣಿಕಾ’ ಚಿತ್ರದ ನಟನೆಗಾಗಿ ಕಂಗನಾ ರಾನಾವತ್ , ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು.

ಡೇವಿಡ್ ಆಟೆನ್ ಬರೋ ನಿರ್ದೇಶನದ, ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ನಿರೂಪಣೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಚಿತ್ರ ನಟ ರಜನಿಕಾಂತ್ ಅವರಿಗೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಜಿನಿಕಾಂತ್ ಅವರ ಚಲನ ಚಿತ್ರ ಬದುಕಿನ ಸಾಧನೆ ಕುರಿತ ದೃಶ್ಯಾವಳಿ ಪ್ರದರ್ಶಿಸಲಾಯಿತು. ನಟ ರಜನಿಕಾಂತ್, ತಮ್ಮ ಸಾಧನೆಗೆ ನೆರವಾದ ಹಿರಿಯ ನಿರ್ದೇಶಕ ಕೆ. ಬಾಲಚಂದರ್, ತಮ್ಮ ಸಹೋದರ ಸತ್ಯನಾರಾಯಣ ಗಾಯಕ್ ವಾಡ್, ಕರ್ನಾಟಕದಲ್ಲಿನ ಸ್ನೇಹಿತ ರಾಜಬಹದ್ದೂರ್ ಅವರನ್ನು ಉಲ್ಲೇಖಿಸಿ, ಧನ್ಯವಾದ ಅರ್ಪಿಸಿದರು.

ಉಪ-ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ತತ್ವವನ್ನು , ದೇಶದ ಚಲನಚಿತ್ರ ಸಂಕೇತಿಸುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮನರಂಜನೆ ಜತೆಗೆ ಸಾಮಾಜಿಕ ಸಂದೇಶವನ್ನೂ ಚಲನಚಿತ್ರ ಮಾಧ್ಯಮ ನೀಡುತ್ತದೆ ಎಂದರು. ದೇಶಿಯ ಮತ್ತು ಪಾರಂಪರಿಕ ಸಂಸ್ಕೃತಿಯನ್ನು ಹೊರಜಗತ್ತಿಗೆ ಪರಿಚಯಿಸುವಲ್ಲಿ ಚಲನಚಿತ್ರ ಮಹತ್ವದ ಸಾಧನವಾಗಿದೆ. ಸಕಾರಾತ್ಮಕ ಭಾವನೆ ಮೂಡಿಸುವಲ್ಲಿ; ತಾಯ್ನಾಡು ಮತ್ತು ಮಾತೃಭಾಷೆಯ ಮೇಲಿನ ಅಭಿಮಾನ ಹೆಚ್ಚಿಸುವಲ್ಲಿ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಿನಿಮಾಗಳ ಕೊಡುಗೆ ಅನನ್ಯ ಎಂದು ಉಪರಾಷ್ಟ್ರಪತಿ ತಿಳಿಸಿದರು. ದಾದಾ ಸಾಹೇಬ್ ಪುರಸ್ಕೃತ ನಟ ರಜಿನಿಕಾಂತ್ ಅವರ ಸಾಧನೆಯನ್ನು ಉಪರಾಷ್ಟ್ರಪತಿ ಶ್ಲಾಘಿಸಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ದೇಶದಲ್ಲಿ ಚಲನಚಿತ್ರ ಉದ್ಯಮ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಚಿತ್ರೀಕರಣ ಸೇರಿದಂತೆ ಚಿತ್ರರಂಗಕ್ಕೆ ಸೇರಿದ ವಿವಿಧ ಕಾರ್ಯಗಳಿಗೆ ಏಕಗವಾಕ್ಷಿ ಸೌಲಭ್ಯ ಒದಗಿಸಲಾಗಿದೆ ಎಂದರು.

ಕೋವಿಡ್ ನಿಂದಾಗಿ ಪ್ರಸ್ತುತ ಜಾಗತಿಕ ಚಿತ್ರರಂಗ ಸಂಕಷ್ಟದಲ್ಲಿದ್ದು, ಇದರ ನಡುವೆಯೂ ಹಲವು ಅವಕಾಶಗಳಿವೆ ಇವುಗಳನ್ನು ಚಿತ್ರನಿರ್ಮಾತೃಗಳು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ದೇಶದಲ್ಲಿ ಚಿತ್ರೀಕರಣಕ್ಕೆ ಅದ್ಭುತ ತಾಣಗಳಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳಿವೆ. ಇವಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
