ದೆಹಲಿ: ಐತಿಹಾಸಿಕ ಕೆಂಪು ಕೋಟೆಯಲ್ಲಿಂದು 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರೀಯ ಗೌರವ ಸಲ್ಲಿಸಲಾಯಿತು ಮತ್ತು ಬ್ಯಾಂಡ್ ಮೂಲಕ ರಾಷ್ಟ್ರಗೀತೆಯ ಗೌರವ ವಂದನೆ ಸಲ್ಲಿಸಲಾಯಿತು.
ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷವಾಗಿ 31 ಜನ ಕನ್ನಡಿಗರು ಸೇರಿದಂತೆ ದೇಶಾದ್ಯಂತ ವಿವಿಧ ವೃತ್ತಿ ಮತ್ತು ಕುಲಕಸುಬು ಮಾಡುತ್ತಿರುವ ಸುಮಾರು 1800 ಜನರು ಮತ್ತು ಅವರ ಕುಟುಂಬದವರು ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬಳಿಕ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ, ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಭಾರತವು ಜನಸಂಖ್ಯೆ. ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ್ದು, ಈ ತ್ರಿವೇಣಿ ಸಂಗಮವು ಭಾರತದ ಪ್ರತಿಯೊಂದು ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ, ಭಗತ್ಸಿಂಗ್, ಸುಖದೇವ ಅವರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರಿಗೆ ನಮ್ಮ ನಮನ ಎಂದರು. ಮಣಿಪುರ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ, ಮಣಿಪುರದಲ್ಲಿ ಹಿಂಸಾಚಾರದಿಂದ ಅನೇಕರು ಮೃತಪಟ್ಟಿದ್ದಾರೆ. ದೇಶ ಮಣಿಪುರದ ಜನರ ಜೊತೆ ಇದ್ದು, ಅಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು. ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು. ದೇಶದ ನಾರಿ, ಯುವಕರು, ರೈತ ಶಕ್ತಿ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ವಿವಿಧತೆಯಲ್ಲಿ ಏಕತೆ ಇದ್ದು, ಪ್ರಜಾಪ್ರಭುತ್ವ ದೇಶದ ಉತ್ತಮ ಭವಿಷ್ಯಕ್ಕೆ ವರದಾನವಾಗಿದೆ. ಭವಿಷ್ಯದ ಸಾವಿರ ವರ್ಷಗಳು ಸಮೃದ್ಧವಾಗಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅಭಿಪ್ರಾಯಪಟ್ಟರು. ಯುವ ಶಕ್ತಿ ಮೇಲೆ ತಮಗೆ ಭರವಸೆ ಇದ್ದು, ಭವಿಷ್ಯದ ದಿನಗಳಲ್ಲಿ ಭಾರತವು ತಂತ್ರಜ್ಞಾನದಲ್ಲಿ ಮೊದಲ ಸ್ಥಾನಕ್ಕೇರಲಿದೆ. ದೇಶದ ತಂತ್ರಜ್ಞಾನದ ನೈಪುಣ್ಯತೆಯ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ. ಯುವಕರ ಶಕ್ತಿಯಲ್ಲಿ ಬಹಳಷ್ಟು ಸಾಮರ್ಥ್ಯ ಇದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. ಇದರಿಂದ ಯುವಜನತೆಗೆ ಹೊಸ ಅವಕಾಶ ದೊರಕಿದೆ. ತಮ್ಮ ಸರ್ಕಾರದ ನೀತಿಯೂ ಯುವಶಕ್ತಿಗೆ ಬಲ ನೀಡುತ್ತಿದೆ. ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯನ್ನು ಕಂಡಿದೆ. ವಿಶ್ವದಲ್ಲಿ ಭಾರತದ ಪ್ರತಿ ಹೆಜ್ಜೆ ಕೂಡ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಆಯುಷ್ಮಾನ್ ಯೋಜನೆಯಿಂದ ದೇಶದ ಬಡವರಿಗೆ ಅನುಕೂಲವಾಗಿದೆ ಎಂದರು.

ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೇನೆಯಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ.ನಮ್ಮದು ಸುರಕ್ಷತೆ, ಶಾಂತಿ ಮತ್ತು ಪ್ರಗತಿಯ ದೇಶವಾಗಿದೆ. ಪರಿವರ್ತನೆಯ ವಾತಾವರಣ ನಿರ್ಮಾಣ ಮಾಡಿದ್ದೇವೆ. ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗುವುದು ಅಗತ್ಯವಿದೆ. ದೇಶದ ಎಲ್ಲ ಜನರು “ಭಾರತದ ಏಕತೆ” ಮಂತ್ರ ಜಪಿಸುತ್ತಾ ಹೆಜ್ಜೆ ಹಾಕಬೇಕಿದೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಲಿದ್ದು, ಭಾರತದ ನಿರ್ಣಯಕ್ಕೆ ಜಾಗತಿಕ ಮನ್ನಣೆ ದೊರೆಯಲಿದೆ. ಭಾರತ ಪ್ರಜಾಪ್ರಭುತ್ವದ ತವರು ಮನೆ. ವಿವಿಧತೆಯಲ್ಲಿ ಏಕತೆಯಿಂದ ಕೂಡಿದ ಪ್ರಮುಖ ರಾಷ್ಟ್ರವಾಗಿದೆ. ದೇಶದಲ್ಲಿ ವೈದ್ಯಕೀಯ, ಇಂಜನಿಯರಿಂಗ್, ಟೆಕ್ನಾಲಾಜಿ, ವಿಜ್ಞಾನ ವಿಷಯಗಳನ್ನು ಹೆಚ್ಚಾಗಿ ಯುವತಿಯರೇ ಕಲಿಯುತ್ತಿದ್ದಾರೆ . ಭಾರತ ವಿಶ್ವದ ಅತಿ ಹೆಚ್ಚು ಮಹಿಳಾ ಪೈಲಟ್ಗಳನ್ನು ಹೊಂದಿದ್ದು, ಇಂದು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ ಎಂದರು.
ಇದಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ ಸಮಾಧಿ ಸ್ಥಳ ರಾಜಘಾಟ್ ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
_with inputs of twtt