2023-24ನೇ ಸಾಲಿನ 5ನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಪ್ರಕಟಿಸಿದರು.
ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಅವರು, ಸತತ 5ನೇ ಬಾರಿಯೂ ರೆಫೋ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೋ ದರವನ್ನು ಶೇಕಡ 6.5ರ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ ಎಂದು ತಿಳಿಸಿದರು. ಭಾರತದ ಆರ್ಥಿಕತೆ ಸದೃಢವಾಗಿ ಮುಂದುವರಿದಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ದರಗಳನ್ನು ಯಥಾಸ್ಥಿತಿ ಮುಂದುವರಿಸಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಉಕ್ಕು, ಸಿಮೆಂಟ್ ಸೇರಿದಂತೆ 8 ಪ್ರಮುಖ ಉತ್ಪಾದನಾ ಕ್ಷೇತ್ರಗಳು ಬೆಳವಣಿಗೆ ದಾಖಲಿಸಿವೆ. ಪೆಟ್ರೋಲಿಯಂ ಉತ್ಪನ್ನಗಳು, ಉಕ್ಕು, ರಾಸಾಯನಿಕ, ಸಿಮೆಂಟ್ ಕ್ಷೇತ್ರಗಳಲ್ಲಿನ ಹೂಡಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಹಣದುಬ್ಬರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ RBI ಎಲ್ಲ ಕ್ರಮಗಳನ್ನು ವಹಿಸಿದೆ ಎಂದು ಹೇಳಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ-ಜಿಡಿಪಿಯನ್ನು ಶೇಕಡ 7ಕ್ಕೆ ಅಂದಾಜಿಸಲಾಗಿದೆ. 3ನೇ ತ್ರೈಮಾಸಿಕದಲ್ಲಿ ಶೇಕಡ 6.5ರಷ್ಟು ವೃದ್ಧಿಯಾಗಿದ್ದು, 4ನೇ ತ್ರೈಮಾಸಿಕದಲ್ಲಿ ಶೇ.6ರಷ್ಟು ವೃದ್ಧಿಯಾಗಿದೆ. 2024-25ನೇ ಸಾಲಿನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡ 6.7ರಷ್ಟು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಗ್ರಾಹಕ ದರ ಸೂಚ್ಯಂಕ ಹಣದುಬ್ಬರವನ್ನು ಶೇಕಡ 5.4ಕ್ಕೆ ಅಂದಾಜಿಸಲಾಗಿದೆ. 2024-25ನೇ ಸಾಲಿನಲ್ಲಿ ಶೇಕಡ 5.2ರಷ್ಟು ಅಂದಾಜಿಸಲಾಗಿದೆ. ಹಣಕಾಸು ಸವಾಲುಗಳನ್ನು ಸ್ಥಿರವಾಗಿ ಎದುರಿಸಲಾಗುತ್ತಿದೆ ಎಂದು ತಿಳಿಸಿದರು.