ನೇಪಾಳ: ಭಗವಾನ್ ಬುದ್ಧ ಜೀವನ, ಜ್ಞಾನ ಮತ್ತು ನಿರ್ವಾಣದ ಮೂರು ಸ್ತರಗಳನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿ. ಬುದ್ಧ ಲುಂಬಿನಿಯಲ್ಲಿ ಜನಿಸಿದ್ದು ವೈಶಾಖ ಪೂರ್ಣಿಮೆಯಂದು. ಬೋಧಗಯಾದಲ್ಲಿ ಜ್ಞಾನ ಪ್ರಾಪ್ತಿಯಾದದ್ದು, ಇದೇ ಪೂರ್ಣಿಮೆಯಂದು ಹಾಗೂ ಖುಷಿ ನಗರದಲ್ಲಿ ಮಹಾ ಪರಿನಿರ್ವಾಣ ಹೊಂದಿದ್ದು, ವೈಶಾಖ ಪೂರ್ಣಿಮೆಯಂದೇ ಇದು ಕೇವಲ ಸಂಯೋಗವಲ್ಲ, ಬುದ್ದತ್ವದ ದಾರ್ಶನಿಕ ಸಂದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನೇಪಾಳದ ಲುಂಬಿನಿಯಲ್ಲಿ ಬುದ್ಧ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೌದ್ಧ ಭಿಕ್ಷುಗಳನ್ನುದ್ದೇಶಿಸಿ ಅವರು, ಆತ್ಮಶೋಧನೆಯಿಂದ ಉತ್ತುಂಗ ತಲುಪಿ, ಜಗತ್ತಿಗೆ ಬೆಳಕು ನೀಡಿದ ಬುದ್ಧ ಜನಿಸಿದ ಮಿತ್ರ ರಾಷ್ಟ್ರ ನೇಪಾಳದ ಲುಂಬಿನಿಯಲ್ಲಿ ಈ ಪವಿತ್ರ ದಿನದಂದು ಪಾಲ್ಗೊಂಡಿರುವುದು ತಮ್ಮ ಸುಕೃತ ಎಂದರು. ನೇಪಾಳವಿಲ್ಲದೆ ರಾಮಾಯಣವೂ ಅಪೂರ್ಣ ಎಂದ ಪ್ರಧಾನಿ, ಭಾರತದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ನೇಪಾಳದ ಜನರಿಗೂ ಸಂತಸ ತಂದಿದೆ ಎಂದು ಹೇಳಿದರು. ಬುದ್ಧನ ಸಂದೇಶ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ. ಬುದ್ಧನ ಬಗ್ಗೆ ಭಾರತ, ನೇಪಾಳ ಎರಡೂ ದೇಶಗಳಲ್ಲಿ ಅಸೀಮಾ ಶ್ರದ್ಧೆಯಿದ್ದು, ಬುದ್ಧನ ಬೋಧನೆಗಳನ್ನು ಜಗತ್ತಿಗೆ ಸಾರಲು ಎರಡೂ ದೇಶಗಳು ಒಗ್ಗೂಡಿ ಶ್ರಮಿಸಲು ವಿಪುಲ ಅವಕಾಶಗಳಿವೆ ಎಂದರು. ಎರಡೂ ದೇಶಗಳು ಅಂತರ್ಗತ ಚೆಕ್ ಪೋಸ್ಟ್ ಆರಂಭಿಸಲು ನಿರ್ಧರಿಸಿದ್ದು, ಈ ಯೋಜನೆ ಪ್ರಗತಿಯಲ್ಲಿದೆ. ಇದರಿಂದ ಎರಡೂ ದೇಶಗಳ ನಡುವೆ ಸುಗಮ ಸಂಚಾರ ಮತ್ತು ಸಾಗಾಟಕ್ಕೆ ಅವಕಾಶವಾಗಲಿದೆ ಎಂದರು. ಬುದ್ಧನಲ್ಲಿ ಬೋಧನೆಯೂ ಇದೆ ಶೋಧನೆಯೂ ಇದೆ. ವಿಚಾರವೂ ಇದೆ ಎಂದ ಪ್ರಧಾನಿ, ರಾಜಕುಮಾರನಾದ ಬುದ್ಧ ಸಕಲ ವೈಭವವನ್ನು ತ್ಯಜಿಸಿ, ಸತ್ಯ ಶೋಧನೆಯಲ್ಲಿ ತೊಡಗಿ, ತ್ಯಾಗದಿಂದಲೂ ಪ್ರಾಪ್ತಿ ಸಾಧ್ಯ ಎಂಬ ಸತ್ಯವನ್ನು ಹಾಗೂ ತ್ಯಾಗದ ಮಹಿಮೆಯನ್ನು ಜಗತ್ತಿಗೆ ಸಾರಿದರು ಎಂದರು. ಇದಕ್ಕೂ ಮುನ್ನ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವೂಬಾ, ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಎರಡೂ ದೇಶಗಳ ನಡುವಿನ ಧಾರ್ಮಿಕ , ಸಾಂಸ್ಕೃತಿಕ ಮತ್ತು ನಾಗರಿಕತೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತ , ನೆರೆಯ ವಿಶ್ವಾಸಾರ್ಹ ರಾಷ್ಟ್ರವಾಗಿದ್ದು, ಬುದ್ಧನ ಸಂದೇಶಗಳು ಉಭಯ ರಾಷ್ಟ್ರಗಳ ಜನರಿಗೆ ಮಾರ್ಗದರ್ಶನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಾಯಾದೇವಿ ದೇಗುಲಕ್ಕೆ ಭೇಟಿ

ನೇಪಾಳ ಭೇಟಿಯಲ್ಲಿ ಇಂದು ಬೆಳಗ್ಗೆ ಪ್ರಧಾನಿ, ಗೌತಮ ಬುದ್ಧನ ಜನ್ಮಸ್ಥಳ ನೇಪಾಳದ ಲುಂಬಿನಿಯಲ್ಲಿ ಮಾಯಾದೇವಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವೂಬಾ ಉಪಸ್ಥಿತರಿದ್ದರು. ಬೌದ್ಧ ಸಂಸ್ಕೃತಿ ಮತ್ತು ಪಾರಂಪರಿಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ನೇಪಾಳದಲ್ಲಿರುವ ಭಾರತೀಯ ಸಮುದಾಯ ಉತ್ಸಾಹದಿಂದ ತ್ರಿವರ್ಣಧ್ವಜವನ್ನು ಹಿಡಿದು ಪ್ರಧಾನಿ ಅವರನ್ನು ಸ್ವಾಗತಿಸಿತು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ಒಪ್ಪಂದಗಳಿಗೆ ಸಹಿ

ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ದೇವೂಬಾ ಸಮ್ಮುಖದಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಕ್ಕೂ ಮುನ್ನ ಲುಂಬಿನಿಗೆ ಆಗಮಿಸಿದ ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸ್ವಾಗತಿಸಿದರು. ಈ ವೇಳೆ ನೇಪಾಳದ ವಿವಿಧ ಸಚಿವರುಗಳು ಹಾಜರಿದ್ದರು. 2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ 5ನೇ ನೇಪಾಳ ಭೇಟಿ ಇದಾಗಿದೆ. ಆದರೆ, ಇದೇ ಮೊದಲ ಬಾರಿಗೆ ಅವರು ಲುಂಬಿನಿಗೆ ಭೇಟಿ ನೀಡಿದ್ದಾರೆ. ನೆರೆ ಮೊದಲು ನೀತಿಗೆ ಅನುಗುಣವಾಗಿ ನೇಪಾಳದ ಈ ಭೇಟಿ ಮಹತ್ವ ಪಡೆದುಕೊಂಡಿದೆ.