ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಪೈಕಿ ಶೇಕಡ 97ಕ್ಕೂ ಅಧಿಕ ನೋಟುಗಳು ವ್ಯವಸ್ಥೆಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಆರ್‌ಬಿಐ ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮೇ 2023ರಲ್ಲಿ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ನೋಟುಗಳ ಪೈಕಿ ಅಕ್ಟೋಬರ್ 31 ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಮೌಲ್ಯವು ಕೇವಲ 0.10 ಲಕ್ಷ ಕೋಟಿಗೆ ಕುಸಿದಿದೆ ಎಂದು ತಿಳಿಸಿದೆ.
ಆರ್‌ಬಿಐ 2023 ರ ಮೇ 19 ರಂದು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. 2023 ರ ಅಕ್ಟೋಬರ್ 7 ರೊಳಗೆ ಯಾವುದೇ ಬ್ಯಾಂಕ್‌ಗಳಲ್ಲಿ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ನಾಗರಿಕರಿಗೆ ವಿನಂತಿಸಿತ್ತು.
ಠೇವಣಿ ಅಥವಾ 2000 ರೂಪಾಯಿ ಬ್ಯಾಂಕ್ ನೋಟಿನ ವಿನಿಮಯಕ್ಕೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಇನ್ನೂ ಅವಕಾಶ ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಸಾರ್ವಜನಿಕರು ಈ ಕಚೇರಿಗಳಿಗೆ ಭಾರತೀಯ ಅಂಚೆ ಮೂಲಕ ನೋಟುಗಳನ್ನು ಕಳುಹಿಸಬಹುದು.