ಬೆಂಗಳೂರು: ರಾಜ್ಯಕ್ಕೆ 2 ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ , ಸಿ ಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಪ್ರಧಾನಿ ಅವರನ್ನು ಬರಮಾಡಿಕೊಂಡರು.
ಪ್ರಧಾನಿ ಅವರು ಬಹು ಹಂತದ ರೈಲ್ವೆ ಯೋಜನೆಗಳು ಮತ್ತು ಮೂಲಸೌಕರ್ಯಕ್ಕೆ ಚಾಲನೆ ನೀಡಲಿದ್ದಾರೆ. ನಾಳೆ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿಂದು ಸರಿಸುಮಾರು 27 ಸಾವಿರ ಕೋಟಿ ರೂಪಾಯಿಗೂ ಅಧಿಕ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಜೊತೆಗೆ , ಬೆಂಗಳೂರು ಉಪನಗರ ರೈಲು ಯೋಜನೆಗೆ ಕೋಮ್ಮಘಟ್ಟದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ.

ಇದೇ ವೇಳೆ ನವೀಕೃತ ಬೆಂಗಳೂರು ಕಂಟೋನ್ಮೆಂಟ್ , ಯಶವಂತಪುರ ಜಂಕ್ಷನ್ ರೈಲ್ವೆ ನಿಲ್ದಾಣಗಳನ್ನು ಉದ್ಘಾಟಿಸಲಿದ್ದು, ಬೆಂಗಳೂರು ರಿಂಗ್ ರೋಡ್ ಯೋಜನೆ, ಬಹುಹಂತದ ಲಾಜಿಸ್ಟಿಕ್ ಪಾರ್ಕ್ ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಿರುವ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಕೊಂಕಣ ರೈಲ್ವೆ ಯೋಜನೆಯ ವಿದ್ಯುದೀಕರಣ ಮಾರ್ಗಕ್ಕೂ ಹಸಿರು ನಿಶಾನೆ ತೋರಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ- IISC ಯಲ್ಲಿ ಮೆದುಳು ಸಂಶೋಧನಾ ಕೇಂದ್ರಕ್ಕೆ ಚಾಲನೆ ನೀಡಲಿದ್ದು, ಬಾಗ್ಚಿ ಪಾರ್ಥಸಾರಥಿ ಬಹುಮಾದರಿಯ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ.
ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ, ನಾಗನಹಳ್ಳಿ ರೈಲು ನಿಲ್ದಾಣದ ಸಬ್ ಅರ್ಬನ್ ಸಂಚಾರಿ ಕೋಚಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೆಂಟರ್ ಆಫ್ EXCELLENCE ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ವೇಳೆ ಅವರು ಸರ್ಕಾರದ ಯೋಜನೆಗಳ ವಿವಿಧ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸುತ್ತೂರು ಮಠ ಮತ್ತು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಾಳೆ, ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಯೋಗ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿಯಾಗಲಿದ್ದಾರೆ.