ಬೆಂಗಳೂರು: ನಾಡಿನಾದ್ಯಂತ ಇಂದು ೬೭ ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಬಸವರಾಜ ಬೊಮ್ಮಾಯಿ, ಕನ್ನಡ ನಾಡು ಪುಣ್ಯದ ನಾಡಾಗಿದ್ದು, ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ್ದು, ಈ ಹೋರಾಟದಲ್ಲಿ ಹಿರಿಯರಾದ ನಿಜಲಿಂಗಪ್ಪ, ಕುವೆಂಪು ಅವರಂತಹ ಮಹಾನ್ ಪುರುಷರು ಪಾಲ್ಗೊಂಡು ನಮಗೆಲ್ಲರಿಗೂ ಸಮೃದ್ಧ ಕರ್ನಾಟಕದ ಕೊಡುಗೆ ನೀಡಲು ಕಾರಣರಾಗಿದ್ದಾರೆ ಎಂದರು. ಕರ್ನಾಟಕ ರಾಜ್ಯ ಇಂದು ಶಿಕ್ಷಣ, ಆರೋಗ್ಯ, ಉದ್ಯೋಗ, ವಾಣಿಜ್ಯ, ಕೈಗಾರಿಕೆಯಂತಹ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಭಾರತ ದೇಶದ ಭವಿಷ್ಯವನ್ನು ಬರೆಯುವಂತಹ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು. ನಮ್ಮ ರಾಜ್ಯದಲ್ಲಿ ಬುದ್ಧಿವಂತಿಕೆಗೆ ಯಾವುದೇ ಕೊರತೆಯಿಲ್ಲ. ಕನ್ನಡ ನಾಡು ಜ್ಞಾನದ ಬೀಡಾಗಿದ್ದು,ಇಂದಿಗೂ ಅಂತಃಕರಣವನ್ನು ಉಳಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಿದೆ. ಪ್ರಸ್ತುತದ ಸನ್ನಿವೇಶದಲ್ಲಿ ಸುಂದರ ನಾಡನ್ನು ಕಟ್ಟುವ ಸಂಕಲ್ಪವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಿದೆ. ಈ ಮೂಲಕ ಒಗ್ಗಟ್ಟಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದರು. ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ಬಳಕೆಯನ್ನು ಕಡ್ಡಾಯ ಮಾಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಸಚಿವ ಬಿ.ಸಿ. ನಾಗೇಶ್ , ನಮ್ಮ ನಾಡು, ನುಡಿ ಶ್ರೀಮಂತಿಕೆಯಿಂದ ಕೂಡಿದ್ದು, ಇಡೀ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಯಥೇಚ್ಛವಾದ ಅರಣ್ಯ ಸಂಪತ್ತು, ಜಲಮೂಲ, ನೈಸರ್ಗಿಕ ಸಂಪತ್ತನ್ನು ಹೊಂದಿರುವ ನಮ್ಮ ನಾಡು ನಮಗೆ ಹೆಮ್ಮೆ ತರುತ್ತದೆ. ಗಂಗ, ಕದಂಬ, ಹೊಯ್ಸಳರು ಆಳಿ ಶ್ರೀಮಂತಿಕೆಯ ಸಂಸ್ಕೃತಿಯನ್ನು ನಮಗೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ, ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ವೇಳೆ ಸಚಿವ ಬಿ.ಸಿ. ನಾಗೇಶ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಬಸವರಾಜ ಹೊರಟ್ಟಿ, ರಿಜ್ವಾನ್ ಅರ್ಷದ್, ಗೋವಿಂದರಾಜ್, ಅ. ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಉಪಸ್ಥಿತರಿದ್ದರು.
_ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋಮಾಡಲು ಕ್ಲಿಕ್ಕಿಸಿ