ಮುಂಗಾರು ಅಧಿವೇಶನ:
ಮೇಲ್ಮನೆ ಕಲಾಪ ಇಂದು ಆರಂಭವಾಗುತ್ತಿದ್ದಂತೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಕಾಗದ ಪತ್ರಗಳ ಮಂಡನೆ ಅವಕಾಶ ಕಲ್ಪಿಸಿದರು. ಸಚಿವ ರಾಜೀವ್ ಚಂದ್ರಶೇಖರ್ ಮತ್ತಿತರರು ಕಾಗದ ಪತ್ರ ಮಂಡಿಸಿದರು.
ಬಳಿಕ ಸಭಾಪತಿ, ಈಗಾಗಲೇ ಗದ್ದಲದಿಂದ 180 ಗಂಟೆಗಳ ಕಲಾಪ ವ್ಯರ್ಥವಾಗಿದ್ದು, ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡಿ ಎಂದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ, ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಸ್ವತಂತ್ರ್ಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಈ ಕುರಿತಂತೆ ನಿಯಮ 267ರಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಸಭಾಪತಿ, ತಾವು ಚರ್ಚೆಗೆ ಇನ್ನೂ ಅನುಮತಿ ನೀಡಿಲ್ಲ ಎಂದು ತಿಳಿಸಿ, ಮುಂದಿನ ಕಲಾಪಕ್ಕೆ ಅನುವು ಮಾಡಿಕೊಟ್ಟರು. ಪ್ರಶ್ನೋತ್ತರ ಕಲಾಪದಲ್ಲಿ ಟೋಲ್ ಕುರಿತ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈಗಾಗಲೇ ಒಂದೇ ವಿಭಾಗದ ಒಂದೇ ಮಾರ್ಗದಲ್ಲಿ ಎರಡು ಟೋಲ್ ಗಳ ನಡುವೆ 60 ಕಿಲೋಮೀಟರ್ ಅಂತರ ಇರಬೇಕೆಂಬ ನಿಯಮವಿದೆ. ಆದರೆ ಕೆಲವೆಡೆ ಖಾಸಗಿ ವಿನಾಯಿತಿ ಟೋಲ್ ಫ್ಲಾಜಾಗಳಿವೆ. ಅವುಗಳನ್ನು ನಿಲ್ಲಿಸಿದರೆ ಗುತ್ತಿಗೆಯ ಕರಾರಿನಂತೆ ಸರ್ಕಾರ ಪರಿಹಾರ ಒದಗಿಸಬೇಕಾಗುತ್ತದೆ ಎಂದರು. ಈಗಾಗಲೇ ಸ್ಯಾಟಲೈಟ್ ಆಧಾರಿತ ಜಿಪಿಎಸ್ ರೀತ್ಯ ಟೋಲ್ ಸಂಗ್ರಹಿಸುವ ವ್ಯವಸ್ಥೆ ಇದೆ . ಮತ್ತೊಂದು ಪರ್ಯಾಯ ವಾಹನದ ಸಂಖ್ಯಾ ಫಲಕವಾಗಿದೆ. ಹೊಸ ತಂತ್ರಜ್ಞಾನದ ನೆರವಿನಿಂದ ವಾಹನದ ಸಂಖ್ಯಾ ಫಲಕ ರೂಪಿಸಲಾಗಿದ್ದು, ಇದರಲ್ಲಿ ವಾಹನ, ಹೆದ್ದಾರಿಯ ಬಿಂದುವನ್ನು ಪ್ರವೇಶಿಸಿದಾಗ ದಾಖಲಾಗುತ್ತದೆ ಮತ್ತು ಹೆದ್ದಾರಿಯಿಂದ ಹೊರ ಬಂದಾಗಲೂ ಕೂಡ ದಾಖಲಾಗುತ್ತದೆ . ಇದರಿಂದ ವಾಹನ ಎಷ್ಟು ಕಿಲೋ ಮೀಟರ್ ಸಂಚರಿಸಿದೆಯೋ ಅಷ್ಟಕ್ಕೆ ಮಾತ್ರವೆ ಟೋಲ್ ಸಂಗ್ರಹವಾಗುತ್ತದೆ. ಇದು ಒಂದು ಉತ್ತಮ ವ್ಯವಸ್ಥೆಯಾಗಿದ್ದು, ಇದನ್ನು ಕಾರ್ಯಗತಗೊಳಿಸಲು ಸರ್ಕಾರ ಪ್ರಯತ್ನಶೀಲವಾಗಿದೆ .ಶೀಘ್ರವೇ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು . ಇದು ಟೋಲ್ ಗಳಲ್ಲಿ ಕಾಯುವಿಕೆಯನ್ನು ತಪ್ಪಿಸುತ್ತದೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಫಾಸ್ಟ್ ಟ್ಯಾಗ್ ಅಳವಡಿಕೆಗೆ ಮುನ್ನ ದೇಶದ ಟೋಲ್ ಸಂಗ್ರಹಣೆ ಅತ್ಯಂತ ಕಡಿಮೆ ಇತ್ತು. ಈಗ ಈ ದಿನದವರೆಗೆ 5 ಕೋಟಿ 56 ಲಕ್ಷ ಫಾಸ್ಟ್ ಟ್ಯಾಗ್ ನೀಡಲಾಗಿದ್ದು, ಶೇಕಡ 97ರಷ್ಟು ವ್ಯಾಪ್ತಿಯಿದೆ. ಇದರಿಂದ ದೈನಂದಿನ ಸರಾಸರಿ ಟೋಲ್ ಸಂಗ್ರಹಣೆ 120 ಕೋಟಿ ರೂಪಾಯಿಗಳಾಗಿದೆ ಎಂದು ವಿವರಿಸಿದರು.