ಬೆಂಗಳೂರು: ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವಿಧಾನಸೌಧದಲ್ಲಿಂದು ಆಯೋಜಿಸಿದ್ದ ‘ಹಲೋ ಕಂದಾಯ ಸಚಿವರೇ ‘ 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಆಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ನೀಡಲಾಗುವ 10 ಸಾವಿರ ರೂಪಾಯಿ ಮಾಸಾಶನ ಸಂಬಂಧ ಸಂತ್ರಸ್ತ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದರು. ನಂತರ ಮುಖ್ಯಮಂತ್ರಿ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಂಕಲ್ಪ ಮಾಡಲಾಗಿದ್ದು, ಸಂಕಷ್ಟದಲ್ಲಿರುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಹಲೋ ಕಂದಾಯ ಸಚಿವರೇ ಎಂಬ ಸಹಾಯವಾಣಿ ತೆರೆದಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಜನಪರ ಆಡಳಿತ ನೀಡಿದಾಗ ಮಾತ್ರವೇ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಆಡಳಿತ ಜನರ ಬಳಿಗೆ ಹೋದಾಗಲೇ ಸಮಸ್ಯೆಗಳಿಗೆ ನೈಜ ಪರಿಹಾರ ದೊರೆಯಲು ಸಾಧ್ಯ . ಮಾನವೀಯತೆ ಜೊತೆ ಹೃದಯವಂತಿಕೆಯನ್ನು ಒಳಗೊಂಡ ಆಡಳಿತ ನೀಡಲು ನಿರ್ಧರಿಸಿದ್ದು, ತಾವು ಅಧಿಕಾರ ವಹಿಸಿಕೊಂಡ ಕೂಡಲೇ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಯಿತು. ರೈತರ ಹೆಣ್ಣು ಮಕ್ಕಳಿಗೆ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ಈ ಸೌಲಭ್ಯ ವಿಸ್ತರಿಸಲಾಗಿದೆ ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ಕಂದಾಯ ದಾಖಲೆಗಳು ಜನಸಾಮಾನ್ಯರಿಗೆ ಸುಲಭವಾಗಿ ತಲುಪಲು ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶಾಸಕರಾದ ಎಂ. ಕೃಷ್ಣಪ್ಪ, ರಿಜ್ವಾನ್ ಅರ್ಷದ್, ಎಂ ಪಿ ಕುಮಾರಸ್ವಾಮಿ, ಸಂಸದ ಪಿ ಸಿ ಮೋಹನ್, ಸಿ ಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಕಂದಾಯ ಇಲಾಖೆ ಪದೆಧಾನ ಕಾರ್ಯದರ್ಶಿ ಅನಿಲಕುಮಾರ್, ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.